ಭಾರತದ ನೌಕಾಪಡೆಯ ಡಾರ್ನಿಯರ್ ವಿಮಾನಗಳ ಹಾರಾಟ ನಿರ್ವಹಣೆಗೆ ಮಹಿಳಾ ಪೈಲಟ್‌ಗಳು ಸಜ್ಜು

Update: 2020-10-22 14:46 GMT

 ಕೊಚ್ಚಿ,ಅ.22: ಭಾರತೀಯ ನೌಕಾಪಡೆಯು ಇದೇ ಮೊದಲ ಬಾರಿಗೆ ತನ್ನ ಡಾರ್ನಿಯರ್ ವಿಮಾನಗಳ ಕಾರ್ಯಾಚರಣೆಗಳಿಗೆ ಮಹಿಳಾ ಪೈಲಟ್‌ಗಳ ಸೇವೆಯನ್ನು ಪಡೆಯಲಿದೆ.

 ದಿಲ್ಲಿಯ ಮಾಳವೀಯ ನಗರ ನಿವಾಸಿ ಲೆ.ದಿವ್ಯಾ ಶರ್ಮಾ, ಉತ್ತರ ಪ್ರದೇಶದ ತಿಹಾರ್‌ನ ಲೆ.ಶುಭಾಂಗಿ ಸ್ವರೂಪ್ ಮತ್ತು ಬಿಹಾರದ ಮುಝಫ್ಫರಪುರದ ಲೆ.ಶಿವಾಂಗಿ ಅವರು ಡಾರ್ನಿಯರ್ ಕಾರ್ಯಾಚರಣೆ ಹಾರಾಟ ತರಬೇತಿ (ಡಿಒಎಫ್‌ಟಿ)ಯನ್ನು ಪೂರ್ಣಗೊಳಿಸಿದ್ದು ‘ಸಂಪೂರ್ಣ ಕಾರ್ಯಾಚರಣೆಯ ಸಾಗರ ವಿಚಕ್ಷಣಾ ಪೈಲಟ್ ’ಗಳಾಗಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಗುರುವಾರ ಕೊಚ್ಚಿಯಲ್ಲಿರುವ ನೌಕಾಪಡೆಯ ವಾಯುನೆಲೆ ‘ಐಎನ್‌ಎಸ್ ಗರುಡ ’ದಲ್ಲಿ ನಡೆದ ನಿರ್ಗಮಿತ ಪಥ ಸಂಚಲನದ ಬಳಿಕ ಸದರ್ನ್ ನೇವಲ್ ಕಮಾಂಡ್ (ಎಸ್‌ಎನ್‌ಸಿ)ನ ಚೀಫ್ ಸ್ಟಾಫ್ ಆಫೀಸರ್ ರಿಯರ್ ಅಡ್ಮಿರಲ್ ಆ್ಯಂಟನಿ ಜಾರ್ಜ್ ಅವರು ತರಬೇತಿಯನ್ನು ಪೂರ್ಣಗೊಳಿಸಿದ ಪೈಲಟ್‌ಗಳಿಗೆ ಪ್ರಶಸ್ತಿಗಳನ್ನು ಪ್ರದಾನಿಸಿದರು. ಡಾರ್ನಿಯರ್ ವಿಮಾನಗಳಲ್ಲಿ ಕಾರ್ಯಾಚರಣೆ ನಡೆಸಲು ಅರ್ಹತೆಯನ್ನು ಪಡೆದಿರುವ ಆರು ಪೈಲಟ್‌ಗಳಲ್ಲಿ ಈ ಮೂವರು ಮಹಿಳಾ ಪೈಲಟ್‌ಗಳೂ ಸೇರಿದ್ದಾರೆ.

ಡಿಒಎಫ್‌ಟಿ ಕೋರ್ಸ್‌ಗೆ ಮುನ್ನ ಈ ಮಹಿಳಾ ಪೈಲಟ್‌ಗಳು ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಭಾಗಶಃ ಪ್ರಾಥಮಿಕ ಹಾರಾಟ ತರಬೇತಿಗಳನ್ನು ಪಡೆದಿದ್ದರು. ಇವರ ಪೈಕಿ ಲೆ.ಶಿವಾಂಗಿ ಅವರು 2019,ಡಿ.2ರಂದು ನೌಕಾಪಡೆಯ ಪೈಲಟ್ ಆಗಿ ಅರ್ಹತೆ ಪಡೆದುಕೊಂಡ ಮೊದಲಿಗರಾಗಿದ್ದಾರೆ.

ಕೋರ್ಸ್ ಒಂದು ತಿಂಗಳ ತಳಮಟ್ಟದ ತರಬೇತಿಯನ್ನು ಒಳಗೊಂಡಿದ್ದು,ಎಸ್‌ಎನ್‌ಸಿಯ ವಿವಿಧ ವೃತ್ತಿಪರ ಶಾಲೆಗಳಲ್ಲಿ ಇದನ್ನು ನಡೆಸಲಾಗಿತ್ತು ಮತ್ತು ಎಂಟು ತಿಂಗಳ ಹಾರಾಟ ತರಬೇತಿಯನ್ನು ಎಸ್‌ಎನ್‌ಸಿಯ ಡಾರ್ನಿಯರ್ ಸ್ಕ್ವಾಡ್ರನ್‌ನಲ್ಲಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News