ದಿಲ್ಲಿ ಹಿಂಸಾಚಾರ ವಿಭಜನೆ ಬಳಿಕ ರಾಜಧಾನಿಯಲ್ಲಿ ನಡೆದ ಅತ್ಯಂತ ಕೆಟ್ಟ ಕೋಮುದಂಗೆ: ನ್ಯಾಯಾಲಯ

Update: 2020-10-22 14:49 GMT

ಹೊಸದಿಲ್ಲಿ,ಅ.22: ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ದಂಗೆಗಳು ವಿಭಜನೆಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತ್ಯಂತ ಕೆಟ್ಟ ಕೋಮು ದಂಗೆಗಳಾಗಿದ್ದವು ಮತ್ತು ಇದು ಪ್ರಮುಖ ಜಾಗತಿಕ ಶಕ್ತಿಯಾಗಲು ಹಾತೊರೆಯುತ್ತಿರುವ ದೇಶದ ಆತ್ಮಸಾಕ್ಷಿಯ ಮೇಲಿನ ಆಳವಾದ ಗಾಯವಾಗಿದೆ ಎಂದು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಗುರುವಾರ ಹೇಳಿದೆ.

 ಕೋಮು ಹಿಂಸಾಚಾರವನ್ನು ಪ್ರಚೋದಿಸಲು ತನ್ನ ತೋಳ್ಬಲ ಮತ್ತು ರಾಜಕೀಯ ಪ್ರಭಾವವನ್ನು ಬಳಸಿದ್ದ ಆರೋಪವನ್ನು ಎದುರಿಸುತ್ತಿರುವ ಮಾಜಿ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ಅವರು ದಂಗೆಗಳಿಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾ.ವಿನೋದ ಯಾದವ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮೊದಲ ಪ್ರಕರಣವು ದಯಾಳಪುರ ಪ್ರದೇಶದಲ್ಲಿ ಸುಮಾರು ಒಂದು ನೂರು ಜನರು ತಾಹಿರ್ ಹುಸೇನ್ ಅವರ ನಿವಾಸದ ತಾರಸಿಯ ಮೇಲೆ ನಿಂತುಕೊಂಡು ಇನ್ನೊಂದು ಕೋಮಿಗೆ ಸೇರಿದ ಜನರ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುತ್ತಿದ್ದ ಘಟನೆಗೆ ಸಂಬಂಧಿಸಿದೆ.

ಎರಡನೇ ಪ್ರಕರಣದಲ್ಲಿ ಪ್ರದೇಶದಲ್ಲಿಯ ಅಂಗಡಿಯೊಂದನ್ನು ಲೂಟಿ ಮಾಡಲಾಗಿದ್ದು,ಇದರಿಂದ ಅಂಗಡಿ ಮಾಲಿಕನಿಗೆ ಸುಮಾರು 20 ಲ.ರೂ.ಗಳ ನಷ್ಟ ಸಂಭವಿಸಿತ್ತು. ಮೂರನೇ ಪ್ರಕರಣವು ಅಂಗಡಿಯೊಂದನ್ನು ಲೂಟಿ ಮಾಡಿ ಬೆಂಕಿ ಹಚ್ಚಿ ಮಾಲಿಕನಿಗೆ ಸುಮಾರು 17-18 ಲ.ರೂ.ಗಳ ನಷ್ಟವನ್ನುಂಟು ಮಾಡಿದ ಘಟನೆಗೆ ಸಂಬಂಧಿಸಿದೆ.

 ಫೆಬ್ರವರಿಯ ದಿಲ್ಲಿ ದಂಗೆಗಳು ಪ್ರಮುಖ ಜಾಗತಿಕ ಶಕ್ತಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಈ ದೇಶದ ಆತ್ಮಸಾಕ್ಷಿಗೆ ಆಳವಾದ ಗಾಯವನ್ನುಂಟು ಮಾಡಿವೆ. ಅರ್ಜಿದಾರರು (ತಾಹಿರ್ ಹುಸೇನ್) ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ, ನಿರ್ದಿಷ್ಟವಾಗಿ ಅವರ ನಿವಾಸವು ದಂಗೆಕೋರರು ಹಿಂಸಾಕೃತ್ಯಗಳನ್ನು ನಡೆಸಲು ಪ್ರಮುಖ ಕೇಂದ್ರವಾಗಿತ್ತು ಎನ್ನುವುದನ್ನು ಪರಿಗಣಿಸಿ ತನ್ನ ವಿರುದ್ಧ ಹೇರಲಾಗಿರುವ ಕಲಮ್‌ಗಳಡಿ ತನ್ನ ಹೊಣೆಗಾರಿಕೆಯಿಂದ ಅವರು ನುಣುಚಿಕೊಳ್ಳುವಂತಿಲ್ಲ ಎಂದು ಹೇಳಿದ ನ್ಯಾಯಾಲಯವು, ಪೂರ್ವಯೋಜಿತ ಸಂಚು ಇಲ್ಲದೆ ಇಷ್ಟೊಂದು ಅಲ್ಪಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಂಗೆಗಳು ಹರಡಲು ಸಾಧ್ಯವಿಲ್ಲ ಎಂದು ತಿಳಿಸಿತು.

ತಾನು ದಂಗೆಗಳಲ್ಲಿ ದೈಹಿಕವಾಗಿ ಭಾಗಿಯಾಗಿರಲಿಲ್ಲ,ಹೀಗಾಗಿ ದಂಗೆಗಳಲ್ಲಿ ತನ್ನ ಪಾತ್ರವಿರಲಿಲ್ಲ ಎಂದು ಹೇಳುವ ಮೂಲಕ ಹುಸೇನ್ ತನ್ನ ಬಾಧ್ಯತೆಯಿಂದ ಜಾರಿಕೊಳ್ಳುವಂತಿಲ್ಲ. ಪ್ರದೇಶದಲ್ಲಿ ಕೋಮು ಹಿಂಸಾಚಾರದ ದಳ್ಳುರಿಯನ್ನು ಹಬ್ಬಿಸಲು ಅವರು ತನ್ನ ತೋಳ್ಬಲ ಮತ್ತು ರಾಜಕೀಯ ಪ್ರಭಾವವನ್ನು ಬಳಸಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದ ನ್ಯಾ.ಯಾದವ್,ಹುಸೇನ್ ಅಪರಾಧ ಸ್ಥಳದಲ್ಲಿದ್ದರು ಮತ್ತು ನಿರ್ದಿಷ್ಟ ಕೋಮಿನ ದಂಗೆಕೋರರನ್ನು ಪ್ರೋತ್ಸಾಹಿಸುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಹೀಗೆ ಅವರು ತನ್ನ ಕೈಗಳು ಮತ್ತು ಮುಷ್ಟಿಗಳನ್ನು ಬಳಸಿರಲಿಲ್ಲ,ಆದರೆ ದಂಗೆಕೋರರನ್ನೇ ಮಾನವ ಅಸ್ತ್ರಗಳನ್ನಾಗಿ ಬಳಸಿದ್ದರು ಮತ್ತು ಈ ದಂಗೆಕೋರರು ಹುಸೇನ್ ಪ್ರಚೋದನೆಯಿಂದ ಯಾರನ್ನೋ ಕೊಲ್ಲುವ ಮನಃಸ್ಥಿತಿಯಲ್ಲಿದ್ದರು ಎಂದರು.

ಹುಸೇನ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದೂ ನ್ಯಾಯಾಲಯವು ಬೆಟ್ಟು ಮಾಡಿತು.

 ಕಾನೂನನ್ನು ದುರುಪಯೋಗಿಸಿಕೊಂಡು ತನ್ನ ಕಕ್ಷಿದಾರರಿಗೆ ಕಿರುಕುಳ ನೀಡುವ ಏಕೈಕ ಉದ್ದೇಶದೊಂದಿಗೆ ಪೊಲೀಸರು ಮತ್ತು ರಾಜಕೀಯ ವಿರೋಧಿಗಳು ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ್ದಾರೆ ಎಂಬ ಹುಸೇನ್ ಪರ ವಕೀಲರ ವಾದವನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News