ಗಡಿರಸ್ತೆಗಳ ನಿರ್ಮಾಣಕ್ಕೆ ಮೋದಿ ಸರಕಾರದ ಆದ್ಯತೆ ಚೀನಾವನ್ನು ನಡುಗಿಸಿದೆ: ಜೆ.ಪಿ.ನಡ್ಡಾ

Update: 2020-10-22 14:50 GMT

 ಶಿಮ್ಲಾ,ಅ.22: ದೇಶದ ಗಡಿಗಳನ್ನು ರಕ್ಷಿಸಲು ಎನ್‌ಡಿಎ ಸರಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಮತ್ತು ಅದು ಗಡಿರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ಚೀನಾಕ್ಕೆ ನಡುಕವನ್ನು ಮೂಡಿಸಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಹೇಳಿದರು.

ದಿಲ್ಲಿಯಿಂದ ಆನ್‌ಲೈನ್ ಮೂಲಕ ಹಿಮಾಚಲ ಪ್ರದೇಶದಲ್ಲಿ ಆರು ಬಿಜೆಪಿ ಕಚೇರಿಗಳ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡುತ್ತಿದ್ದ ನಡ್ಡಾ,ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಡಿ ಸರಕಾರವು ಕಳೆದ ಆರು ವರ್ಷಗಳಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯಿಂದ ಅರುಣಾಚಲ ಪ್ರದೇಶದವರೆಗೆ 4,700 ಕಿ.ಮೀ.ಉದ್ದದ ಸರ್ವಋತು ಚತುಷ್ಪಥ ರಸ್ತೆಗಳನ್ನು ನಿರ್ಮಿಸಿದೆ. ಇದೇ ರೀತಿ ದೊಡ್ಡ ಟ್ಯಾಂಕ್‌ಗಳ ಸಂಚಾರಕ್ಕಾಗಿ ಗಡಿಯಲ್ಲಿ ಒಟ್ಟು 14.7 ಕಿ.ಮೀ.ಉದ್ದದ ದ್ವಿಪಥ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದು ಭಾರತವನ್ನು ಸದೃಢಗೊಳಿಸಿದೆ ಮತ್ತು ಚೀನಾಕ್ಕೆ ನಡುಕ ಹುಟ್ಟಿಸಿದೆ ಎಂದರು. ಈ ಹಿಂದೆ ಸಣ್ಣ ಸೇತುವೆಗಳಿದ್ದವು ಮತ್ತು ಸೇನೆಯ ಟ್ರಕ್‌ಗಳು ಹಾದು ಹೋಗುವಾಗ ಇತರ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕಿತ್ತು ಎಂದು ಅವರು ತಿಳಿಸಿದರು.

ಇತ್ತೀಚಿಗೆ ಮೋದಿಯವರಿಂದ ರೋಹ್ಟಂಗ್‌ನಲ್ಲಿ ಉದ್ಘಾಟನೆಗೊಂಡಿರುವ ಅಟಲ್ ಸುರಂಗಕ್ಕಾಗಿ ಹಿಮಾಚಲ ಪ್ರದೇಶದ ಜನತೆಯನ್ನು ಅಭಿನಂದಿಸಿದ ನಡ್ಡಾ,ಈ ಸುರಂಗವೂ ದೇಶದ ಸುರಕ್ಷತೆಯಲ್ಲಿ ಪಾತ್ರ ವಹಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News