ಪೊಲೀಸ್‌ಗೆ ಹಲ್ಲೆ ಪ್ರಕರಣ: ಮಹಾರಾಷ್ಟ್ರ ಸಚಿವೆಯ ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್

Update: 2020-10-22 14:53 GMT

ಮುಂಬೈ, ಅ.22: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಮಹಾರಾಷ್ಟ್ರದ ಸಚಿವೆ ಯಶೋಮತಿ ಠಾಕುರ್‌ಗೆ ವಿಧಿಸಿದ್ದ ಮೂರು ತಿಂಗಳ ಜೈಲುಶಿಕ್ಷೆಯನ್ನು ಗುರುವಾರ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಅಮಾನತಿನಲ್ಲಿರಿಸಿ ಆದೇಶಿಸಿದೆ.

2012ರ ಮಾರ್ಚ್ 24ರಲ್ಲಿ ಅಮರಾವತಿ ಜಿಲ್ಲೆಯ ಚೂನಾಭತ್ತಿ ಪ್ರದೇಶದಲ್ಲಿ ಘಟನೆ ನಡೆದಿತ್ತು. ಆಗ ಶಾಸಕರಾಗಿದ್ದ ಯಶೋಮತಿ ಠಾಕುರ್ ತನ್ನ ಬೆಂಬಲಿಗರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ಪೊಲೀಸರ ಮೇಲೆ ಹಲ್ಲೆಗೈಯಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಅಮರಾವತಿಯ ಸೆಷನ್ಸ್ ನ್ಯಾಯಾಲಯ, ಅಕ್ಟೋಬರ್ 15ರಂದು ತೀರ್ಪು ನೀಡಿದ್ದು ಠಾಕುರ್‌ಗೆ 3 ತಿಂಗಳ ಜೈಲುಶಿಕ್ಷೆ ವಿಧಿಸಿತ್ತು. ತೀರ್ಪನ್ನು ಪ್ರಶ್ನಿಸಿ ಠಾಕುರ್ ಹೈಕೋರ್ಟ್‌ಗೆ ಅರ್ಜಿ ದಾಖಲಿಸಿದ್ದರು. ಕೇವಲ ಸಾಕ್ಷಿಗಳ ಸಾಕ್ಷಿಯ ಆಧಾರದಲ್ಲಿ ಠಾಕುರ್‌ರನ್ನು ಅಪರಾಧಿ ಎಂದು ನಿರ್ಣಯಿಸುವ ಮೂಲಕ ಸೆಷನ್ಸ್ ಕೋರ್ಟ್ ತಪ್ಪೆಸಗಿದೆ ಎಂದು ಸಚಿವೆಯ ಪರ ನ್ಯಾಯವಾದಿ ವಾದಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಶಿಕ್ಷೆಯನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಘೋಷಿಸಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News