ಕೋವಿಡ್ ನಿಯಮ ಉಲ್ಲಂಘಿಸಿ ರಾಜಕೀಯ ಪಕ್ಷಗಳು ಜನರನ್ನು ಅಪಾಯಕ್ಕೆ ತಳ್ಳುತ್ತಿವೆ: ಚುನಾವಣಾ ಆಯೋಗ ಅಸಮಾಧಾನ

Update: 2020-10-22 14:56 GMT

ಹೊಸದಿಲ್ಲಿ, ಅ.22: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸೂಚಿಸಲಾಗಿರುವ ಮಾರ್ಗಸೂಚಿಗಳನ್ನು ನಿರ್ಭೀತಿಯಿಂದ ಗಾಳಿಗೆ ತೂರಿರುವ ರಾಜಕೀಯ ಪಕ್ಷಗಳು, ಜನರನ್ನು ಅಪಾಯಕ್ಕೆ ತಳ್ಳುತ್ತಿವೆ ಎಂದು ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಬುಧವಾರ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಪತ್ರ ಬರೆದಿರುವ ಆಯೋಗ, ರಾಜಕೀಯ ಪಕ್ಷದ ಸಭೆಗಳಲ್ಲಿ ಸುರಕ್ಷಿತ ಅಂತರದ ನಿಯಮ ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದು, ಮಾಸ್ಕ್ ಧರಿಸದಿರುವುದು ತನ್ನ ಗಮನಕ್ಕೆ ಬಂದಿದೆ ಎಂದಿದೆ.

ಚುನಾವಣಾ ಪ್ರಚಾರದ ಸಂದರ್ಭ ಸಾಧ್ಯವಾದಷ್ಟು ಆನ್‌ಲೈನ್ ಸಂವಾದ ನಡೆಸಬೇಕು. ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಗೆ ತಿಳಿಸಬೇಕು ಮತ್ತು ಅಭ್ಯರ್ಥಿಗಳು, ಅವರ ಬೆಂಬಲಿಗರು, ಸಭೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ತನ್ನ ಸೂಚನೆಯನ್ನು ರಾಜಕೀಯ ಪಕ್ಷಗಳು ಸಾರಾ ಸಗಟಾಗಿ ಉಲ್ಲಂಘಿಸುತ್ತಿವೆ ಎಂದು ಆಕ್ಷೇಪಿಸಿದೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಅಕ್ಟೋಬರ್ 15ರಂದು ನಡೆದ ಜೆಡಿಯು ಮುಖಂಡರ ಪ್ರಚಾರ ಸಭೆಯನ್ನು ಆಯೋಗ ಉದಾಹರಿಸಿದೆ. ಈ ಸಭೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು ಹಾಗೂ ವೇದಿಕೆಯಲ್ಲಿ ಅಧಿಕ ನಾಯಕರು ಸೇರಿದ್ದರಿಂದ ವೇದಿಕೆ ಕುಸಿದು ಬಿದ್ದಿತ್ತು. ಹೀಗೆ ಮಾಡುವುದರಿಂದ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಉಲ್ಲಂಘಿಸುವುದು ಮಾತ್ರವಲ್ಲ, ಸಭೆಯಲ್ಲಿ ಪಾಲ್ಗೊಂಡ ಜನರನ್ನೂ ಕೊರೋನ ಸೋಂಕಿನ ಅಪಾಯಕ್ಕೆ ಒಡ್ಡಿದಂತಾಗುತ್ತದೆ. ಆದ್ದರಿಂದ ಇಂತಹ ಚುನಾವಣೆ ಸಂದರ್ಭ ಇಂತಹ ಲೋಪ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು .

ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಜಿಲ್ಲಾಡಳಿತ ಗಮನ ಹರಿಸಬೇಕು. ಮಾರ್ಗಸೂಚಿ ಉಲ್ಲಂಘನೆಯಾದರೆ ಕಾರ್ಯಕ್ರಮ ಸಂಘಟಿಸಿದವರು ಹಾಗೂ ಸಂಬಂಧಪಟ್ಟ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದೆ. ಕೊರೋನ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ಐಪಿಸಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ 2 ವರ್ಷ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News