ಪಾಲ್ಘರ್: ಥಳಿಸಿ ಹತ್ಯೆ ಪ್ರಕರಣ; ಮತ್ತೆ 8 ಮಂದಿಯನ್ನು ಬಂಧಿಸಿದ ಸಿಐಡಿ

Update: 2020-10-22 16:49 GMT

ಮುಂಬೈ, ಅ. 22: ಪಾಲ್ಘರ್ ಜಿಲ್ಲೆಯಲ್ಲಿ ಈ ವರ್ಷ ಎಪ್ರಿಲ್‌ನಲ್ಲಿ ಮೂವರನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ 8 ಮಂದಿಯನ್ನು ಮಹಾರಾಷ್ಟ್ರ ಪೊಲೀಸ್‌ನ ಸಿಐಡಿ ಗುರುವಾರ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ 186 ಆರೋಪಿಗಳನ್ನು ಬಂಧಿಸಿದಂತಾಗಿದೆ. ಅಲ್ಲದೆ, 11 ಅಪ್ರಾಪ್ತರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬುಧವಾರ 24 ಮಂದಿಯನ್ನು ಬಂಧಿಸಿದ ಬಳಿಕ ಗುರುವಾರ ಮತ್ತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಈ ಆರೋಪಿಗಳು ಘಟನೆ ನಡೆದ ಸ್ಥಳದಲ್ಲಿ ಇದ್ದರು. ಹಾಗೂ ಮೂವರು ವ್ಯಕ್ತಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ನಿಲ್ಲಿಸಿಲ್ಲ ಎಂದು ಅವರು ಹೇಳಿದ್ದಾರೆ. ಈ ಸಂದರ್ಭ ಇವರಲ್ಲಿ ಕೆಲವರು ಘಟನೆಯ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಇನ್ನು ಕೆಲವರು ಗಲಭೆ ಎಬ್ಬಿಸುತ್ತಿದ್ದರು. ಆರೋಪಿಗಳ ಕೈಯಲ್ಲಿ ಕೂಡ ದೊಣ್ಣೆ ಇತ್ತು ಎಂದು ಅವರು ತಿಳಿಸಿದ್ದಾರೆ. ಮುಂಬೈಯಿಂದ ಸೂರತ್‌ಗೆ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಸಾಧುಗಳು ಹಾಗೂ ಕಾರಿನ ಚಾಲಕನನ್ನು ಮಕ್ಕಳ ಕಳ್ಳರು ಎಂಬ ಶಂಕೆಯಲ್ಲಿ ಪಾಲ್ಗಾರ್‌ನ ಗಡ್ಚಿರೋಳಿ ಗ್ರಾಮದಲ್ಲಿ ಎಪ್ರಿಲ್ 16ರಂದು ಗುಂಪೊಂದು ಥಳಿಸಿ ಹತ್ಯೆಗೈದಿತ್ತು. ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಪಾಲ್ಘರ್ ಪೊಲೀಸರು ನಡೆಸಿದ್ದರು. ಆದರೆ, ಅನಂತರ ರಾಜ್ಯ ಸಿಐಡಿಗೆ ಹಸ್ತಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News