ನಾವು ಮತ್ತೆ ಹೋರಾಟ ನಡೆಸಲಿದ್ದೇವೆ: ಪ್ರತಿಭಟನೆ ಕುರಿತು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಯೋಗೇಂದ್ರ, ಅರುಂಧತಿ

Update: 2020-10-22 18:29 GMT

ಹೊಸದಿಲ್ಲಿ, ಅ. 22: ಪ್ರತಿಭಟನೆಗಾಗಿ ಸಾರ್ವಜನಿಕ ಪ್ರದೇಶವನ್ನು ಆಕ್ರಮಿಸಿಕೊಳ್ಳುವಂತಿಲ್ಲ ಹಾಗೂ ಪ್ರತಿಭಟನೆಯನ್ನು ನಿಯೋಜಿತ ಸ್ಥಳದಲ್ಲಿ ನಡೆಸಬೇಕು ಎಂದು ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹಾಗೂ ಲೇಖಕಿ ಆರುಂಧತಿ ರಾಯ್ ಮೊದಲಾದವರನ್ನು ಒಳಗೊಂಡ ಗಣ್ಯ ನಾಗರಿಕರ ತಂಡ ಗುರುವಾರ ಖಂಡಿಸಿದೆ.

ಹೊಸದಿಲ್ಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಏರ್ಪಡಿಸಲಾದ ಚರ್ಚೆಯ ಸಂದರ್ಭ ನಾಗರಿಕರ ತಂಡ ಈ ಖಂಡನೆ ವ್ಯಕ್ತಪಡಿಸಿದೆ. ಜನರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಲು ಪ್ರಯತ್ನಿಸಿದ ಪೊಲೀಸರು ಹಾಗೂ ಸರಕಾರದ ಕ್ರಮವನ್ನು ತಂಡ ಟೀಕಿಸಿದೆ. ಕನ್ಸರ್ನ್‌ಡ್ ಸಿಟಿಝನ್ಸ್ ಕಲೆಕ್ಟಿವ್ ಬ್ಯಾನರ್ ಅಡಿಯ ಈ ತಂಡದಲ್ಲಿ ಸಫಾಯಿ ಕರ್ಮಚಾರಿ ಆಂದೋಲನದ ಸ್ಥಾಪಕ ಹಾಗೂ ಸಂಚಾಲಕ ಬೆಜವಾಡ ವಿಲ್ಸನ್, ಸಾಮಾಜಿಕ ಹೋರಾಟಗಾರ್ತಿ, ಜೆಎನ್‌ಯು ಪ್ರಾಧ್ಯಾಪಕಿ ನಿವೇದಿತಾ ಮೆನನ್, ಸುಪ್ರೀಂ ಕೋರ್ಟ್ ವಕೀಲ ಸಂಜಯ್ ಹೆಗ್ಡೆ, ನಾಗರಿಕ ಹಕ್ಕು ಸಂಘಟನೆ ಯುನೈಟೆಡ್ ಎಗೈನ್ಸ್‌ಟ್ ಹೇಟ್‌ನ ಸಹ ಸಂಸ್ಥಾಪಕ ನದೀಮ್ ಖಾನ್ ಮೊದಲಾದವರು ಇದ್ದಾರೆ.

‘‘ಪ್ರಜಾಪ್ರಭುತ್ವ ಹಾಗೂ ಭಿನ್ನಾಭಿಪ್ರಾಯ ಜೊತೆ ಜೊತೆಯಲ್ಲಿ ಸಾಗಬೇಕು. ಆದರೆ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರತಿಭಟನೆ ನಿಯೋಜಿತ ಪ್ರದೇಶದಲ್ಲಿ ಮಾತ್ರ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ದಂಡಿ ಯಾತ್ರೆ ನಿಯೋಜಿತ ಪ್ರದೇಶದಲ್ಲಿ ನಡೆದಿದೆಯೇ ? ಜಲಿಯನ್ ವಾಲಾಬಾಗ್ ಪ್ರತಿಭಟನೆ ನಿಯೋಜಿತ ಪ್ರದೇಶದಲ್ಲಿ ನಡೆದಿದೆಯೇ ?’’ ಎಂದು ತಂಡ ಬಿಡುಗಡೆ ಮಾಡಿದ ಜಂಟಿ ಹೇಳಿಕೆ ತಿಳಿಸಿದೆ.

ಪ್ರತಿಭಟನೆ ಪ್ರಜಾಪ್ರಭುತ್ವದ ತಿರುಳು. ಈ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕನ್ನು ಅಪರಾಧೀಕರಣಗೊಳಿಸುವ ಮೂಲಕ ನಮ್ಮ ಹಕ್ಕನ್ನು ನಿಗ್ರಹಿಸುವ ಎಲ್ಲ ಪ್ರಯತ್ನದ ವಿರುದ್ಧ ನಾವು ಹೋರಾಟ ನಡೆಸಲಿದ್ದೇವೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News