60 ವರ್ಷಗಳಿಂದ ದಿನಂಪ್ರತಿ ಸೈಕಲಿನಲ್ಲಿ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ ಈ `ಡಾಕ್ಟರ್'

Update: 2020-10-23 09:38 GMT

ನಾಗ್ಪುರ :  ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯ ಮುಲ್ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗೆ ತಮ್ಮ ಸೈಕಲ್ನಲ್ಲಿ ಪಯಣಿಸಿ  ಗ್ರಾಮಸ್ಥರ ಮನೆ ಬಾಗಿಲಿಗೆ  ಬಂದು ಚಿಕಿತ್ಸೆ ನೀಡುತ್ತಿರುವ 87 ವರ್ಷದ  ಹಿರಿಯ `ಡಾಕ್ಟರ್' ಒಬ್ಬರು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. 

ನಾಗ್ಪುರ ಕಾಲೇಜ್ ಆಫ್ ಹೋಮಿಯೋಪತಿಯಲ್ಲಿ ಡಿಪ್ಲೋಮಾ ಶಿಕ್ಷಣ ಪಡೆದಿರುವ  ರಾಮಚಂದ್ರ ದಂಡೇಕರ್ ಅವರನ್ನು ಜನರು ಪ್ರೀತಿಯಿಂದ `ಡಾಕ್ಟರ್' ಎಂದೇ ಕರೆಯುತ್ತಾರೆ. ಕಳೆದ 60 ವರ್ಷಗಳಿಂದ ಅವರು  ಜನರಿಗೆ ಚಿಕಿತ್ಸೆ ನೀಡುತ್ತಲೇ ಇದ್ದಾರೆ. ಮೊಬೈಲ್ ಫೋನ್ ಕೂಡ ತಮ್ಮ ಜತೆಗೆ ಕೊಂಡೊಯ್ಯದ, ಪಾದರಕ್ಷೆ  ಯಾ ಕನ್ನಡಕ ಧರಿಸದ ಈ `ಡಾಕ್ಟರ್' ಪ್ರತಿ ದಿನ  ಮುಂಜಾನೆ 6.30ಕ್ಕೆ ತಮ್ಮ ಸೈಕಲಿನಲ್ಲಿ ಎರಡು ಚೀಲಗಳಲ್ಲಿ ಔಷಧಿ ಮತ್ತಿತರ  ವೈದ್ಯಕೀಯ ಸಲಕರಣೆಗಳನ್ನು ಹೊತ್ತು ಗ್ರಾಮಗಳತ್ತ ಸಾಗುತ್ತಾರೆ.

ಪ್ರತಿ ದಿನ ಮಾಡುವ ಸೈಕಲ್ ಸವಾರಿ ಅವರ ದೈಹಿಕ ಕ್ಷಮತೆಯನ್ನು ಹೆಚ್ಚಿಸಿದೆಯಲ್ಲದೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲಿಯ ತನಕ ಅವರನ್ನು ಕಾಡಿಲ್ಲ. ಸಾವಿರಾರು ರೋಗಿಗಳಿಗೆ ಇಲ್ಲಿಯ ತನಕ ಚಿಕಿತ್ಸೆ ನೀಡಿರುವ ಅವರು ನೂರಾರು ಮಂದಿಯ ಪ್ರಾಣ ಉಳಿಸಿದ್ದಾರೆ.

ಗ್ರಾಮಗಳಿಗೆ ತೆರಳಿ ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಳ್ಳುವ ಅವರ ಬಳಿಗೆ ರೋಗಿಗಳು ಬರುತ್ತಾರೆ. ಚಿಕಿತ್ಸೆ ನೀಡಿ ಯಾವುದೇ ಫೀಸ್ ಅನ್ನು ಅವರು ಕೇಳದೇ ಇದ್ದರೂ ಜನರು ನೀಡಿದ್ದನ್ನು ಸ್ವೀಕರಿಸುತ್ತಾರೆ.

ವಿನೋಭಾ ಭಾವೆ ಅವರ ಆಶ್ರಮಕ್ಕೆ ಖ್ಯಾತವಾಗಿರುವ ವಾರ್ಧ ಜಿಲ್ಲೆಯ ಪವೋನರ್ ಎಂಬಲ್ಲಿ ಜನಿಸಿರುವ ರಾಮಚಂದ್ರ ಅವರು  ಹೋಮಿಯೋಪತಿ ಶಿಕ್ಷಣ ನಂತರ ಆಗಿನ ಕಾಲದ ಕೆಲ ಖ್ಯಾತ ಹೋಮಿಯೋಪತಿ ವೈದ್ಯರ ಅಡಿಯಲ್ಲಿ ಪಳಗಿದ್ದರು. ತಮ್ಮ ಅನುಭವ ಬಳಸಿ ಅವರು ತಮ್ಮ ರೋಗಿಗಳಿಗೆ ಹೋಮಿಯೋಪತಿ, ಅಲೋಪತಿ ಮತ್ತು ಆಯುರ್ವೇದ ಚಿಕಿತ್ಸೆ ನೀಡುತ್ತಾರೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ ಅವರು ಯಾವುದೇ ಭಯವಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಕೋವಿಡ್ ಲಕ್ಷಣಗಳಿರುವವರಿಗೆ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆಯೂ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News