ಮೊಂಟೆಪದವು: 'ಇನ್ಫೋಸಿಸ್ ಫೌಂಡೇಶನ್ ಸೇವಾಭಾರತಿ ದಿವ್ಯಾಂಗ ಸೇವಾ ಸಮುಚ್ಚಯ' ನಿರ್ಮಾಣಕ್ಕೆ ಶಿಲಾನ್ಯಾಸ

Update: 2020-10-23 09:34 GMT

ಮಂಗಳೂರು, ಅ.23: ಸಮಾಜದಲ್ಲಿ ವಿಕಲಾಂಗ ಚೇತನರು ಸೇರಿದಂತೆ ದುರ್ಬಲರಿಗೆ ನೆರವಾಗುವ ಮಾನವೀಯ ಕಾರ್ಯಕ್ಕೆ ಎಲ್ಲ ಜನರು ಕೈ ಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವುನಲ್ಲಿ  ಸೇವಾಭಾರತಿ ಮಂಗಳೂರು ಸಂಸ್ಥೆಯು ಇನ್ಫೋಸಿಸ್ ಫೌಂಡೇಶನ್‌ನ ಸಹಯೋಗದಲ್ಲಿ ನಿರ್ಮಿಸಲಿರುವ ದಿವ್ಯಾಂಗ ಸೇವಾ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.

 ಈ ನಿಟ್ಟಿನಲ್ಲಿ ಇನ್ಪೋಸಿಸ್  ತಮ್ಮ ಸಿ.ಎಸ್.ಆರ್ ನಿಧಿಯಲ್ಲಿ ಸುಮಾರು ರೂ.14 ಕೋಟಿ ವೆಚ್ಚದ ಅತ್ಯಾಧುನಿಕ ಸೌಲಭ್ಯವುಳ್ಳ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲಿರುವುದು ಶ್ಲಾಘನೀಯ ಎಂದರು.

ಈ ಸಮುಚ್ಚಯದಲ್ಲಿ ಸಿಬ್ಬಂದಿಗೆ ಅಗತ್ಯವಿರುವ ವಸತಿ ಗೃಹ ನಿರ್ಮಾಣಕ್ಕೆ ಸರಕಾರದಿಂದ ನೆರವು ನೀಡುವುದಾಗಿ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸೇವಾಭಾರತಿ  ಮಂಗಳೂರು ಇದರ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಎಚ್.ನಾಗರಾಜ್ ಭಟ್ ಮಾತನಾಡಿ, ಈ 'ಇನ್ಫೋಸಿಸ್ ಫೌಂಡೇಶನ್  ಸೇವಾಭಾರತಿ ದಿವ್ಯಾಂಗ ಸೇವಾ ಸಮುಚ್ಚಯ'ದಲ್ಲಿ ವಿಶೇಷ ಮಕ್ಕಳ ಸಾಮಾನ್ಯ ಶಾಲೆ, ವಸತಿ ಶಾಲೆ, ವಿಶೇಷ ಶಾಲೆಯ ಶಿಕ್ಷಕರ ತರಬೇತಿ ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರ, ವಿದ್ಯಾರ್ಥಿ ಮತ್ತುವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಮತ್ತು ನಿರಂತರ ಫಿಸಿಯೋಥೆರಪಿ ಚಿಕಿತ್ಸೆ, ಯೋಗ, ವೈದ್ಯರುಗಳ ತಂಡದ ಸೇವೆ ಲಭ್ಯವಿರಲಿದೆ. 2 ಎಕರೆ ಜಾಗದಲ್ಲಿ ಇದು ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

ಸಮಾರಂಭದಲ್ಲಿ  ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಸತೀಶ್ ಕುಂಪಲ ,ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್, ಸೇವಾ ಭಾರತಿ  ಸಂಸ್ಥೆಯ ಸಂಸ್ಥಾಪಕ ಸುಮತಿ ಶೆಣೈ, ಟ್ರಸ್ಟಿಗಳಾದ ಯು.ವಿ.ಶೆಣೈ, ವಿನೋದ್ ಶೆಣೈ, ಲೆಕ್ಕ ಪರಿಶೋಧಕ ಗಿರಿಧರ್ ಕಾಮತ್, ಡಾ.ಮಾಧವ ಕಾಮತ್, ಇನ್ಫೋಸಿಸ್ ಫೌಂಡೇಶನ್ ನ ಪ್ರತಿನಿಧಿಗಳು  ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News