ಹಲಸಿನ ಹಣ್ಣಿನ ಇಂಧನ ತಯಾರಿ ಕಡಿಮೆ ವೆಚ್ಚದ ಮೌಲ್ಯಾಧಾರಿತ ಉತ್ಪನ್ನ: ಬಾಲವಿಜ್ಞಾನಿ ಪ್ರಖ್ಯಾತ್, ಪ್ರಣವ್ ಅಭಿಪ್ರಾಯ

Update: 2020-10-23 11:59 GMT

ಪುತ್ತೂರು : ಎಲ್ಲೆಂದರಲ್ಲಿ ಯಥೇಚ್ಚವಾಗಿ ಸಿಗುತ್ತಿರುವ ಹಲಸಿನ ಹಣ್ಣು ಕೇವಲ ಸೇವಿಸಲು ಮಾತ್ರ ಅಲ್ಲ, ಇದರಿಂದ ತಯಾರಿಸಿದ ಇಂಧನದಿಂದ ಕಡಿಮೆ ವೆಚ್ಚದಲ್ಲಿ ಮೌಲ್ಯಾಧಾರಿತ ಉತ್ಪನ್ನಗಳನ್ನು ಪಡೆಯಬಹುದು. ಹಲಸಿನ ಹಣ್ಣಿನಿಂದ ಇಂಧನ ತಯಾರಿಸಬಹುದು ಎಂಬುದನ್ನು ಸಂಶೋಧನೆ ನಡೆಸಿ, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಯೋಜನೆಯೊಂದಿಗೆ ಗುರುತಿಸಿಕೊಂಡಿರುವ ಪುತ್ತೂರಿನ  ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರಖ್ಯಾತ್ ವೈ.ಬಿ ಮತ್ತು ಪ್ರಣವ್ ವೈ.ಬಿ ಅವರು ಅಭಿಪ್ರಾಯ.

ಶುಕ್ರವಾರ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ `ವಿದ್ಯಾರ್ಥಿ ವಿಜ್ಞಾನಿಗೊಳಿಂದಿಗೆ ಮಾಧ್ಯಮ ಸಂವಾದ' ಕಾರ್ಯಕ್ರಮದಲ್ಲಿ ಹಲಸಿನ ಹಣ್ಣಿನಿಂದ ಇಂಧನ ತಯಾರಿಸಬಹುದು ಎಂಬ ಬಗ್ಗೆ ಸಂಶೋಧನೆ ನಡೆಸಿ ಯೋಜನಾ ವರದಿಯನ್ನು ಮಂಡಿಸಿ, ಅಂತರಾಷ್ಟ್ರೀಯ ಸಮಾವೇಶಕ್ಕೆ ಆಯ್ಕೆಯಾಗುವ ಅರ್ಹತೆ ಪಡೆದ ಈ ಶಾಲಾ ವಿದ್ಯಾರ್ಥಿಗಳಾದ ಪ್ರಖ್ಯಾತ್ ಮತ್ತು ಪ್ರಣವ್ ಅವರು  ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸುಮಾರು ಎರಡು ಕೆಜಿಯಷ್ಟು ಹಲಸಿನ ಹಣ್ಣಿನಿಂದ 250 ಎಂ.ಎಲ್. ಇಂಧನ(ಇಥೇನಾಲ್) ಪಡೆಯಬಹುದು. ಎಲ್ಲಾ ತಳಿಯ ಹಲಸಿನಹಣ್ಣು  ಬಳಕೆ ಮಾಡಿಕೊಳ್ಳಬಹುದು. ಆದರೆ ಈ ಇಂಧನವನ್ನು ಮಾತ್ರ ನೇರವಾಗಿ ವಾಹನಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪೆಟ್ರೋಲ್ ಜೊತೆಗೆ ಸೇರಿಕೊಂಡು ಬಳಕೆ ಮಾಡುವುದರಿಂದ ಇಂಧನದ ಖರ್ಚುಗಳನ್ನು ಗ್ರಾಹಕರು ಕಡಿಮೆ ಮಾಡಿಕೊಳ್ಳಬಹುದು, ಇದೊಂದು ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಮೌಲ್ಯಾಧಾರಿತ ಉತ್ಪನ್ನವಾಗಿದೆ.  ಕೊಳೆತ ಹಲಸಿನ ಹಣ್ಣುಗಳನ್ನೂ ಉಪಯೋಗಿಸಲಾಗುವುದು. ಇದರಿಂದಾಗಿ ಕೊಳೆತು ಮರದಡಿ ಬಿದ್ದು ಹೋದ ಹಣ್ಣಿನಿಂದ ಸೊಳ್ಳೆ ಉತ್ಪತಿಯಾಗಿ ರೋಗ ರುಜಿನಗಳು ಹರಡುವುದನ್ನೂ ಕಡಿಮೆ ಮಾಡಬಹುದು. ಇದಕ್ಕೆ ಈ ಯೋಜನೆ ಎಲ್ಲರಿಗೂ ಮತ್ತು ಎಲ್ಲದಕ್ಕೂ ಪೂರಕವಾಗಿದೆ ಎಂದು ತಿಳಿಸಿದರು.

ಮಾಧ್ಯಮ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅವರು ಹಲಸಿನ ಹಣ್ಣಿನಿಂದ ಇಂಧನ ತಯಾರಿಗೆ ಕುರಿತು ಪ್ರಾಜೆಕ್ಟ್ ಭಾರತ ದೇಶದಿಂದ ಏಕೈಕವಾಗಿ ತನ್ನ ಶಾಲೆಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿದ್ದು, ಅಮೇರಿಕಾದ ಶೆಲ್ ಕಂಪೆನಿ ಯೋಜನೆಯನ್ನು ಪಡೆದುಕೊಂಡು ಮುಂದಿನ ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ಮುಂದಿನ ಹಂತದಲ್ಲಿ ಹಲಸಿನ ಹಣ್ಣಿನಿಂದ ಯಥೇಚ್ಛವಾಗಿ ಇಂಧನ ತಯಾರಿಸಿದ್ದಲ್ಲಿ ಹಲಸಿನ ಹಣ್ಣಿಗೆ ಬೇಡಿಕೆ ಬಂದು ರೈತರು ತಮ್ಮ ಜಮೀನಿನಲ್ಲಿ ಹಲಸಿನ ಹಣ್ಣನ್ನು ಬೆಳೆಯಲು ಸಹಕಾರಿಯಾಗಲಿದೆ ಎಂದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ, ದಯಾನಂದ ರೈ ಮನವಳಿಕೆಗುತ್ತು, ಕುಂಬ್ರ ದುರ್ಗಾ ಪ್ರಸಾದ್ ರೈ, ನಿರಂಜನ ರೈ ಮಠಂತಬೆಟ್ಟು, ರಮೇಶ್ ರೈ ಸಾಂತ್ಯ, ನಿವೃತ್ತ ಶಿಕ್ಷಕಿ ವಸಂತಿ ಕೆ., ವಿಜ್ಞಾನ ಶಿಕ್ಷಕಿ ಜಯಲಕ್ಷ್ಮೀ ಎ., ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೂಪಕಲಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News