ಶಿರ್ವದಲ್ಲಿ ಭತ್ತದ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ

Update: 2020-10-23 13:30 GMT

ಶಿರ್ವ, ಅ.23: ಸರಕಾರ ಯೋಜನೆಗಳು ಮೇಲ್ವರ್ಗದ ರೈತರನ್ನು ಮಾತ್ರ ತಲುಪುತ್ತಿದ್ದು, ಗ್ರಾಮೀಣ ತಳಮಟ್ಟದ ಸಾಮಾನ್ಯ ಕೃಷಿಕರಿಗೆ ತಲುಪುತ್ತಿಲ್ಲ. ಸರಕಾರದ ಕೃಷಿ ಪೂರಕ ಯೋಜನೆಗಳ ಎಲ್ಲಾ ಸೌಲಭ್ಯಗಳು ತಳಮಟ್ಟದ ಕೃಷಿಕರಿಗೂ ಸಿಗುವಂತಾಗಬೇಕು ಎಂದು ಭತ್ತದ ಬೆಳೆಯಲ್ಲಿ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ ಗ್ಯಾಬ್ರಿಯಲ್ ಮಥಾಯಸ್ ಪಿಲಾರು ತಿಳಿಸಿದ್ದಾರೆ.

ಉಡುಪಿ ಜಿಪಂ, ಕೃಷಿ ಇಲಾಖೆ, ಕಾಪು ರೈತ ಸಂಪರ್ಕ ಕೇಂದ್ರ, ಶಿರ್ವ ರೋಟರಿ ಕ್ಲಬ್‌ಗಳ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ(ಅಕ್ಕಿ) ಯೋಜನೆಯಡಿ ಶಿರ್ವ ಕಲ್ಲೊಟ್ಟು ರೈತಪಂಡಿತ ರಾಜ್ಯಪ್ರಶಸ್ತಿ ಪುರಸ್ಕೃತ ರಾಘವೇಂದ್ರ ನಾಯಕ್ ಅವರ ನಿವಾಸದಲ್ಲಿ ಶುಕ್ರವಾರ ನಡೆದ ಭತ್ತದ ಬೆಳೆ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾಪು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ, ಇಲಾಖೆಯ ಯೋಜನೆ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಪಿ.ಶೇಖರ್, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಪ್ರಗತಿಪರ ಕೃಷಿಕರಾದ ಲಕ್ಷ್ಮಣ ನಾಯಕ್, ಸುಜನ್ ಮನೋಹರ್, ಮೋಹನ್ ನಾಯಕ್, ಸೀತಾರಾಮ ನಾಯಕ್, ಸಂತೋಷ್ ಶೆಟ್ಟಿ, ಸುಮಿತ್ರಾ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ರಜನಿ, ಪ್ರಗತಿಪರ ಕೃಷಿಕೆ ಆಶಾ ಆರ್.ನಾಯಕ್ ಉಪಸ್ಥಿತರಿದ್ದರು.

ಶಿರ್ವ ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News