ಮುಡಿಪು ರೆಡ್ ಬಾಕ್ಸೈಟ್ ಗಣಿಗಾರಿಕೆ ದಾಳಿ ಪ್ರಕರಣ; ದಾಖಲೆ ನೀಡಿಯೂ ಅಮಾಯಕರು ಬಲಿಪಶು: ಆರೋಪ

Update: 2020-10-23 14:13 GMT

ಮಂಗಳೂರು, ಅ.23: ಮುಡಿಪು ಪರಿಸರದಲ್ಲಿನ ರೆಡ್ ಬಾಕ್ಸೈಟ್ ಗಣಿಗಾರಿಕೆ ಮೇಲೆ ಜಿಲ್ಲಾಡಳಿತ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಅಮಾಯಕರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಾಹನಗಳ ಮಾಲಕರು ಆರೋಪಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಟಾಚಿ ಮಾಲಕ ಜಗದೀಶ್ ಆಳ್ವ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಗಣಿಗಾರಿಕೆಯ ಕಾರ್ಯಾಚರಣೆ ಸಂದರ್ಭ ಅದೇ ಮಾರ್ಗ ದಲ್ಲಿ ಸಂಚರಿಸುತ್ತಿದ್ದ ಎಲ್ಲ ವಾಹನಗಳನ್ನು ವಶಕ್ಕೆ ಪಡೆದು, ಸಮೀಪದ ಯಾರ್ಡ್‌ನಲ್ಲಿ ಕೂಡಿಹಾಕಲಾಗಿತ್ತು. ಅದೇ ವೇಳೆ ಅಧಿಕಾರಿಗಳಲ್ಲಿ ವಾಹನಗಳ ದಾಖಲೆ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಗಣಿಗಾರಿಕೆಯಲ್ಲಿ ಭಾಗಿಯಾಗದ ಎರಡು ಹಿಟಾಚಿ, ಜೆಸಿಬಿ ಸಹಿತ 12 ವಾಹನಗಳನ್ನು ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿದೆ. ಕೆಲವು ವಾಹನ ಗಳು ಬೇರೆ ಕೆಲಸ, ಕಾಮಗಾರಿಗಳಲ್ಲಿ ತೊಡಗಿದ್ದವು. ಇನ್ನು ಕೆಲ ವಾಹನಗಳು ಸ್ವಂತ ಜಾಗದಲ್ಲಿ ರಸ್ತೆಯ ಪಕ್ಕ ನಿಲುಗಡೆಯಾಗಿದ್ದವು. ಆದಾಗ್ಯೂ, ಅಧಿಕಾರಿಗಳು ವಾಹನ ವಶಕ್ಕೆ ಪಡೆದರು. ಕೂಡಲೇ ಪರವಾನಿಗೆ ದಾಖಲೆ ನೀಡಿದ್ದೆವು. ಮುಂದಿನ ದಿನಗಳಲ್ಲಿ ವಾಹನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ನಂತರ ಸಂತ್ರಸ್ತರಿಗೆ ಸ್ಪಂದನೆ ನೀಡಿಲ್ಲ ಎಂದರು.

ಬಳಿಕ ಜಿಲ್ಲಾಡಳಿತ, ಗಣಿ ಮತ್ತು ವಿಜ್ಞಾನ ಇಲಾಖೆಗೆ ಭೇಟಿ ನೀಡಿದ್ದೆವು. ವಾಹನ ಬಿಡುಗಡೆ ಮಾಡುವುದಾಗಿ ಪುನಃ ಭರವಸೆ ನೀಡಿದ್ದರು. ಈ ನಡುವೆ ನ್ಯಾಯಾಲಯದಿಂದ ಹಲವು ವಾಹನಗಳ ಮಾಲಕರಿಗೆ ‘ಸಮನ್ಸ್’ ಬಂದಿದೆ. ಜಿಲ್ಲಾಡಳಿತ ತಮಗೆ ಅನ್ಯಾಯ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.

ಮುಡಿಪು ಭಾಗದಿಂದ ಆಂಧ್ರ ಪ್ರದೇಶದಲ್ಲಿ ದಿನವೂ ಹಲವು ಭಾರೀ ವಾಹನಗಳು ಸಂಚರಿಸುತ್ತವೆ. ಅಧಿಕಾರಿಗಳು, ಪೊಲೀಸರು ದಾಳಿ ನಡೆಸುವ ಮೊದಲೇ ಎಚ್ಚೆತ್ತು ಆ ಜಾಗದಲ್ಲಿ ವಾಹನಗಳ ದಾಖಲೆ, ಪರವಾನಿಗೆ ಪರಿಶೀಲಿಸಿದ್ದರೆ ಇಂಥ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಯಾವುದೇ ತಪ್ಪು ಮಾಡದ ಅಮಾಯಕರ ವಾಹನಗಳನ್ನು ವಾಪಸ್ ನೀಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಹ್ಮದ್ ಇಕ್ಬಾಲ್ ಕನ್‌ಸ್ಟ್ರಕ್ಷನ್‌ನ ಮುಹಮ್ಮದ್ ಮಜೀದ್, ದೇರಳಕಟ್ಟೆಯ ಎಂ-ಸ್ಯಾಂಡ್‌ನ ಹಮೀದ್ ಕುಂಞಿ, ಕೊಣಾಜೆಯ ಕೆಂಪುಕಲ್ಲು ವಾಹನ ಮಾಲಕ ವಿಕ್ಟರ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News