ಮಲ್ಪೆ ಬೋಟಿಗೆ ಢಿಕ್ಕಿ ಹೊಡೆದ ಕೊಲೆಯತ್ನ ಪ್ರಕರಣ: ತಮಿಳುನಾಡಿನ 10 ಮೀನುಗಾರರ ಬಂಧನ; ಬೋಟು ವಶ

Update: 2020-10-23 15:30 GMT

ಮಲ್ಪೆ, ಅ. 23: ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದ ಕಾರಣಕ್ಕಾಗಿ ಮಲ್ಪೆಯ ಬೋಟಿಗೆ ಢಿಕ್ಕಿ ಹೊಡೆದು ಕೊಲೆಗೆ ಯತ್ನಿಸಿರುವ ಆರೋಪದಲ್ಲಿ ತಮಿಳುನಾಡಿನ 10 ಮಂದಿ ಮೀನುಗಾರರನ್ನು ಮಲ್ಪೆ ಪೊಲೀಸರು ಬಂಧಿಸಿ, ಕೇರಳ ಮೂಲದ ಬೋಟನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಲ್ಪೆ ಬಂದರಿನಿಂದ 10 ನಾಟಿಕಲ್ ಮೈಲು ದೂರದಲ್ಲಿ ಕೇರಳ ಮೂಲದ ‘ಇಂಡಿಯನ್’ ಬೋಟಿನಲ್ಲಿ ತಮಿಳುನಾಡಿನ ಮೀನುಗಾರರು ಅಕ್ರಮ ವಾಗಿ ಲೈಟ್ ಫಿಶಿಂಗ್ ಹಾಗೂ ಚೌರಿ ಹಾಕಿ ಮೀನು ಹಿಡಿಯುತ್ತಿದ್ದು, ಈ ಬಗ್ಗೆ ಅ.22ರಂದು ಮಲ್ಪೆಯ ಶಾನ್‌ರಾಜ್ ಎಂಬವರ ಮಾಲಕತ್ವದ ‘ಮಕರ ಸಂಕ್ರಾಂತಿ’ ಪರ್ಸಿನ್ ಬೋಟಿನಲ್ಲಿದ್ದ ಮೀನುಗಾರರು ಪ್ರಶ್ನಿಸಿದ್ದರೆನ್ನಲಾಗಿದೆ.

ಈ ವೇಳೆ ತಮಿಳುನಾಡಿನ ಮೀನುಗಾರರು ಮಕರ ಸಂಕ್ರಾಂತಿ ಬೋಟಿನಲ್ಲಿದ್ದ ಮೀನುಗಾರರ ಮೇಲೆ ದಾಳಿ ನಡೆಸಿ, ತಮ್ಮ ಬೋಟನ್ನು ಮಕರ ಸಂಕ್ರಾಂತಿ ಬೋಟಿಗೆ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದರೆಂದು ದೂರಲಾಗಿದೆ. ಇದರಿಂದ 10ಲಕ್ಷ ರೂ. ಹಾನಿಯಾಗಿದ್ದು, ಮಕರ ಸಂಕ್ರಾಂತಿ ಯಲ್ಲಿದ್ದ ಇಬ್ಬರು ಮೀನು ಗಾರರಿಗೆ ಗಾಯಗಳಾಗಿವೆ. ಬಳಿಕ ಸಹಾಯಕ್ಕೆ ಬಂದ ಇತರ ಬೋಟಿನವರು ತಮಿಳುನಾಡು ಮೀನುಗಾರರನ್ನು ಬೋಟು ಸಹಿತ ವಶಕ್ಕೆ ಪಡೆದು ಬಂದರಿಗೆ ಕರೆತಂದಿದ್ದರು.

ಈ ಬಗ್ಗೆ ‘ಮಕರ ಸಂಕ್ರಾಂತಿ’ ಬೋಟಿನ ತಾಂಡೇಲ ಕಿಶೋರ್ ಕರ್ಕೇರ ಮಲ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು, ಬೋಟನ್ನು ವಶಕ್ಕೆ ಪಡೆದು, 10 ಮೀನುಗಾರರನ್ನು ಅ.23ರಂದು ಬಂಧಿಸಿದ್ದಾರೆ. ಇವರನ್ನು ಇಂದು ರಾತ್ರಿ ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದು, ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಲಾಗಿದೆ ಎಂದು ಮೂಲ ಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News