ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಡಿವೈಎಫ್‌ಐ ಆಗ್ರಹ

Update: 2020-10-23 16:03 GMT

ಮಂಗಳೂರು, ಅ.23: ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಡಿವೈಎಫ್‌ಐ ಜಿಲ್ಲಾ ಘಟಕವು ಪಾಲಿಕೆಗೆ ಆಗ್ರಹಿಸಿದೆ.

ನಗರದ ಹೃದಯ ಭಾಗವಾದ ಬಂದರು ರಸ್ತೆ, ಕ್ಲಾಕ್ ಟವರ್ ರಸ್ತೆ, ರೋಸಾರಿಯೋ ರಸ್ತೆ, ಕಾರ್ ಸ್ಟ್ರೀಟ್ ಸಹಿತ ವಿವಿಧೆಡೆ ರಸ್ತೆ ಕಾಮಗಾರಿಯು ಏಕಕಾಲಕ್ಕೆ ಪ್ರಾರಂಭಿಸಿ ಬಹುತೇಕ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ನಿಧಾನಗತಿಯ ಕಾಮಗಾರಿಯಿಂದಾಗಿ ನಗರ ಪ್ರದೇಶದ ರಸ್ತೆ ಓಡಾಟದಲ್ಲಿ ಅಸ್ತವ್ಯಸ್ತತೆ ಕಂಡುಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಎಲ್ಲೆಂದರಲ್ಲಿ ವಾಹನ ದಟ್ಟನೆಯಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಿಧಾನಗತಿಯ ಕಾಮಗಾರಿಯಿಂದ ರಸ್ತೆಗಳು ಮುಚ್ಚಲ್ಪಟ್ಟಿದ್ದು ವಾಹನ ಸವಾರರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಂದರು ರಸ್ತೆಯ ಕಾಮಗಾರಿಯಿಂದ ಆ ಪ್ರದೇಶದ ಸಗಟು ವ್ಯಾಪಾರಿಗಳು, ಕೂಲಿ, ಹಮಾಲಿ ಕಾರ್ಮಿಕರು, ಮೀನು ವ್ಯಾಪಾರಿಗಳು, ದಿನಕೂಲಿ ನೌಕರರು ಮತ್ತು ಜನಸಾಮಾನ್ಯರು ದಿನನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರೊಸಾರಿಯೋ ರಸ್ತೆಯ ಕಾಮಗಾರಿಯಿಂದ ಮೀನಿನ ಧಕ್ಕೆ ಪ್ರದೇಶಕ್ಕೆ ಸಂಚರಿಸುವ ಲಾರಿ ಚಾಲಕರು, ಮೀನು ವ್ಯಾಪಾರಿಗಳು ಕೂಡ ಬಂದರು ರಸ್ತೆಯನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ನಗರದ ವಿವಿಧೆಡೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯ ವೇಗ ಹೆಚ್ಚಿಸಿ ಕೆಲಸ ಪೂರ್ಣಗೊಳಿಸುವ ಮೂಲಕ ಜನಸಾಮಾನ್ಯರ, ವಾಹನ ಸವಾರರ ಸುಗಮ ಸಂಚಾರಕ್ಕೆ ಮುಕ್ತವನ್ನಾಗಿಸಲು ಡಿವೈಎಫ್‌ಐ ಆಗ್ರಹಿಸಿತು.

ನಿಯೋಗದಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಶ್ರೀನಾಥ್ ಕಾಟಿಪಳ್ಳ, ಮನ್ಸೂರ್, ಬಂದರು ಹಮಾಲಿ ಕಾರ್ಮಿಕರ ಮುಖಂಡರಾದ ರಫೀಕ್ ಹರೇಕಳ, ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News