ಪ್ರಧಾನಿ ಮೋದಿ ವಲಸಿಗರ ಮುಂದೆ ತಲೆ ಬಾಗಿದರು; ಆದರೆ, ಸಹಾಯ ಮಾಡಲು ನಿರಾಕರಿಸಿದರು: ರಾಹುಲ್‌ಗಾಂಧಿ

Update: 2020-10-23 16:29 GMT

ನವಾಡ, ಅ. 23: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಸಂದರ್ಭ ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟ ಹಾಗೂ ಗಡಿಯಲ್ಲಿ ಚೀನಾದ ಆಕ್ರಮಣಶೀಲತೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನವಾಡದಲ್ಲಿ ಶುಕ್ರವಾರ ಜಂಟಿ ರ್ಯಾಲಿಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಬಿಹಾರದಲ್ಲಿ ಮೊದಲ ರ್ಯಾಲಿ ನಡೆಸಿದ ಬಳಿಕ ಈ ರ್ಯಾಲಿ ನಡೆದಿದೆ. ಗಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯುವ ಯೋಧರಿಗೆ ತಲೆ ಬಾಗಿ ವಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ರ್ಯಾಲಿಯಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಅವರು ಚೀನಾ ಆಕ್ರಮಣದಿಂದ ಭಾರತೀಯ ಭೂಭಾಗವನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ. ‘‘ಬಿಹಾರದ ಯೋಧರ ಮುಂದೆ ತಲೆ ಬಾಗಿ ವಂದಿಸುತ್ತೇನೆ ಎಂದು ಮೋದಿ ಜಿ ಹೇಳಿದ್ದಾರೆ. ಸಂಪೂರ್ಣ ದೇಶವೇ ಹುತಾತ್ಮ ಯೋಧರಿಗೆ ತಲೆ ಬಾಗಿ ವಂದಿಸಿದೆ. ಆದರೆ, ಅದು ಪ್ರಶ್ನೆಯಲ್ಲ. ಪ್ರಶ್ನೆ ಇರುವುದು ಕಾರ್ಯಾಚರಣೆಯಲ್ಲಿ ಬಿಹಾರದ ಯುವ ಯೋಧರು ಹುತಾತ್ಮರಾದಾಗ ಪ್ರಧಾನಿ ಅವರು ಏನು ಮಾಡುತ್ತಿದ್ದರು’’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

 ‘‘ಚೀನಾ ಸೇನೆ ನಮ್ಮ ಭೂಭಾಗದ ಒಳಗೆ ಪ್ರವೇಶಿಸಿಲ್ಲ ಎಂದು ಪ್ರಧಾನಿ ಅವರು ಸುಳ್ಳು ಹೇಳಿದ್ದಾರೆ. ನಮ್ಮ ಯೋಧರು ಸಾವನ್ನಪ್ಪುವಾಗ ಪ್ರಧಾನಿ ಅವರು ಎಲ್ಲಿದ್ದರು ?’’ ಎಂದು ಅವರು ಪ್ರಶ್ನಿಸಿದರು. ಕೊರೋನ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ಸಂದರ್ಭ ಉದ್ಯೋಗ ಹಾಗೂ ಮನೆಗಳನ್ನು ಕಳೆದುಕೊಂಡ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ಮರಳಿದ ಸಂದರ್ಭದ ಸಂಕಷ್ಟದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ‘‘ಕಾರ್ಮಿಕರಿಗೆ ತಲೆ ಬಾಗುತ್ತೇನೆ ಎಂದು ಅವರು (ಪ್ರಧಾನಿ) ಹೇಳಿದ್ದಾರೆ. ಆದರೆ, ಕಾರ್ಮಿಕರಿಗೆ ನಿಜವಾದ ಅವಶ್ಯಕತೆ ಇದ್ದಾಗ ಅವರು ಏನನ್ನೂ ಮಾಡಿಲ್ಲ. ಅವರು ಬಾಯಾರಿ, ಹಸಿವಿನಿಂದ ನಡೆದುಕೊಂಡು ಸಾವಿರಾರು ಕಿ.ಮೀ. ಕ್ರಮಿಸಿದರು. ಆದರೆ, ಮೋದಿ ಜಿ ಅವರಿಗೆ ರೈಲಿನ ವ್ಯವಸ್ಥೆ ಮಾಡಲಿಲ್ಲ. ನೀವು ಸಾಯಿರಿ, ನಾವು ಕ್ಯಾರ್ ಮಾಡಲ್ಲ ಎಂದು ಸರಕಾರ ಹೇಳಿತ್ತು’’ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News