×
Ad

ಲಿಬಿಯ: ಯುದ್ಧನಿರತ ಬಣಗಳಿಂದ ಶಾಂತಿ ಒಪ್ಪಂದಕ್ಕೆ ಸಹಿ: ವಿಶ್ವಸಂಸ್ಥೆ ಘೋಷಣೆ

Update: 2020-10-23 23:38 IST

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 23: ಲಿಬಿಯದ ಯುದ್ಧನಿರತ ಬಣಗಳು ದೇಶಾದ್ಯಂತದ ಎಲ್ಲ ಪ್ರದೇಶಗಳಲ್ಲಿ ಶಾಶ್ವತ ಯುದ್ಧವಿರಾಮ ಆಚರಿಸುವ ಒಪ್ಪಂದವೊಂದಕ್ಕೆ ಸಹಿ ಹಾಕಿವೆ ಎಂದು ವಿಶ್ವಸಂಸ್ಥೆಯ ಲಿಬಿಯ ಘಟಕ ತಿಳಿಸಿದೆ.

ಸ್ವಿಟ್ಸರ್‌ಲ್ಯಾಂಡ್‌ನ ಜಿನೀವದಲ್ಲಿ ಗುರುವಾರ ನಡೆದ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ.

ಯುದ್ಧಪೀಡಿತ ಉತ್ತರ ಆಫ್ರಿಕದ ದೇಶಾದ್ಯಂತ ತಕ್ಷಣದಿಂದ ಶಾಶ್ವತ ಯುದ್ಧ ವಿರಾಮವನ್ನು ಜಾರಿಗೆ ತರುವ ‘ಐತಿಹಾಸಿಕ ಸಾಧನೆ’ಯನ್ನು ಯುದ್ಧನಿರತ ತಂಡಗಳು ಮಾತುಕತೆಯಲ್ಲಿ ಮಾಡಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಯ ಪ್ರತಿನಿಧಿ ಸ್ಟೀಫನ್ ಟರ್ಕಿ ವಿಲಿಯಮ್ಸ್ ನೇತೃತ್ವದಲ್ಲಿ ಈ ವಾರ ನಡೆದ ಸಂಧಾನದ ಬಳಿಕ, 5+5 ಜಂಟಿ ಸೇನಾ ಕಮಿಶನ್ ‘‘ಲಿಬಿಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸುವತ್ತ ಮಹತ್ವದ’ ಒಪ್ಪಂದಕ್ಕೆ ಬಂದಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಲಿಬಿಯದ ಅಂತರ್‌ರಾಷ್ಟ್ರೀಯ ಮಾನ್ಯತೆ ಪಡೆದ ರಾಷ್ಟ್ರೀಯ ಮಾನ್ಯತೆಯ ಸರಕಾರ ಮತ್ತು ಖಲೀಫ ಹಫ್ತಾರ್‌ರ ಲಿಬಿಯ ನ್ಯಾಶನಲ್ ಆರ್ಮಿಯ ನಡುವೆ ಮಾತುಕತೆಗಳು ನಡೆದ ಬಳಿಕ ಜಿನೀವದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಟ್ಯುನೀಶಿಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಜಕೀಯ ಮಾತುಕತೆಗಳ ವೇಳೆ ಒಪ್ಪಂದವನ್ನು ಪರಿಶೀಲಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News