ಸುಡಾನ್-ಇಸ್ರೇಲ್ ಶಾಂತಿ ಒಪ್ಪಂದ: ಟ್ರಂಪ್ ಘೋಷಣೆ

Update: 2020-10-24 17:01 GMT

ಖಾರ್ತೂಮ್ (ಸುಡಾನ್), ಅ. 24: ಇಸ್ರೇಲನ್ನು ಮಾನ್ಯ ಮಾಡಲು ಹಾಗೂ ಅದರೊಂದಿಗಿನ ಸಂಬಂಧಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಸುಡಾನ್ ಒಪ್ಪಿಕೊಂಡಿದೆ ಎಂದು ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.

 ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಈ ಮಹತ್ವದ ‘ರಾಜತಾಂತ್ರಿಕ ಕ್ಷಿಪ್ರಕ್ರಾಂತಿ’ ಸಂಭವಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹರೈನ್ ದೇಶಗಳು ಇಸ್ರೇಲ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಕಳೆದ ತಿಂಗಳು ಅಮೆರಿಕದ ಶ್ವೇತಭವನದಲ್ಲಿ ಸಹಿ ಹಾಕಿವೆ. ಇದಕ್ಕಿಂತಲೂ ಹೆಚ್ಚಿನ ಮಹತ್ವ ಸುಡಾನ್-ಇಸ್ರೇಲ್ ಶಾಂತಿ ಒಪ್ಪಂದಕ್ಕಿದೆ. ಯಾಕೆಂದರೆ ಸುಡಾನ್ ಇಸ್ರೇಲ್ ವಿರುದ್ಧ ಯುದ್ಧ ಮಾಡಿತ್ತು.

1948ರ ಅರಬ್-ಇಸ್ರೇಲ್ ಯುದ್ಧದಲ್ಲಿ ಸುಡಾನ್ ಪಾಲ್ಗೊಂಡಿತ್ತು. ಬಳಿಕ, 1967ರಲ್ಲಿ ಇಸ್ರೇಲ್ ವಿರುದ್ಧ ನಡೆದ ಆರು ದಿನಗಳ ಯುದ್ಧದಲ್ಲೂ ಅದು ಭಾಗವಹಿಸಿತ್ತು.

‘ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೇಶಗಳ’ ಪಟ್ಟಿಯಿಂದ ಸುಡಾನನ್ನು ಕೈಬಿಡುವ ಪ್ರಸ್ತಾವಕ್ಕೆ ಟ್ರಂಪ್ ಚಾಲನೆ ನೀಡಿದ ಕ್ಷಣಗಳ ಬಳಿಕ, ಅದು ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡಿರುವುದನ್ನು ಟ್ರಂಪ್ ಘೋಷಿಸಿದರು. ಈ ಪಟ್ಟಿಯಿಂದ ಹೊರಬರುವುದು ಸುಡಾನ್‌ನ ಮಹತ್ವದ ಗುರಿಯಾಗಿತ್ತು.

ಪ್ರಾದೇಶಿಕ ಶಕ್ತಿ ಕೇಂದ್ರ ಸೌದಿ ಅರೇಬಿಯ ಸೇರಿದಂತೆ ಇನ್ನೂ ಹಲವು ಅರಬ್ ದೇಶಗಳು ಇಸ್ರೇಲ್‌ಗೆ ಮಾನ್ಯತೆ ನೀಡುವುದನ್ನು ಎದುರು ನೋಡುತ್ತಿವೆ ಎಂದು ಟ್ರಂಪ್ ಹೇಳಿದರು.

ಈಗ ಇಸ್ರೇಲ್‌ಗೆ ಮಾನ್ಯತೆ ನೀಡಿರುವ ಅರಬ್ ದೇಶಗಳ ಸಂಖ್ಯೆ ಐದಕ್ಕೇರಿದೆ. ಅವುಗಳೆಂದರೆ- ಜೋರ್ಡಾನ್, ಈಜಿಪ್ಟ್, ಯುಎಇ, ಬಹರೈನ್ ಮತ್ತು ಸುಡಾನ್.

ಒಪ್ಪಂದಕ್ಕೆ ಸುಡಾನ್ ರಾಜಕೀಯ ಪಕ್ಷಗಳ ತಿರಸ್ಕಾರ

ಇಸ್ರೇಲ್‌ನೊಂದಿಗಿನ ಸಂಬಂಧಗಳನ್ನು ಸಾಮಾನ್ಯ ಸ್ಥಿತಿಗೆ ತರುವುದಕ್ಕಾಗಿ ಆ ದೇಶದೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸುಡಾನ್ ತೆಗೆದುಕೊಂಡಿರುವ ನಿರ್ಧಾರವನ್ನು ಸುಡಾನ್‌ನ ರಾಜಕೀಯ ಪಕ್ಷಗಳು ತಿರಸ್ಕರಿಸಿವೆ.

ಪ್ರಸ್ತಾಪಿತ ಒಪ್ಪಂದದ ವಿರುದ್ಧ ಪ್ರತಿಪಕ್ಷ ರಂಗವೊಂದನ್ನು ರಚಿಸುವುದಾಗಿ ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ.

ಶಾಂತಿ ಒಪ್ಪಂದಕ್ಕೆ ಸಂಬಂಧಿಸಿ ಇಸ್ರೇಲ್, ಸುಡಾನ್ ಮತ್ತು ಅಮೆರಿಕಗಳು ಶುಕ್ರವಾರ ನೀಡಿರುವ ಜಂಟಿ ಹೇಳಿಕೆಯ ವಿರುದ್ಧ ಸುಡಾನೀಯರು ರಾಜಧಾನಿ ಖಾರ್ತೂಮ್‌ನಲ್ಲಿ ಶುಕ್ರವಾರವೇ ಪ್ರತಿಭಟನೆ ನಡೆಸಿದರು.

ಇಸ್ರೇಲ್ ಜೊತೆಗಿನ ಶಾಂತಿ ಒಪ್ಪಂದವನ್ನು ಸ್ವೀಕರಿಸುವ ಬದ್ಧತೆಯನ್ನು ಸುಡಾನ್ ಜನರು ಹೊಂದಿಲ್ಲ ಎಂದು ಸುಡಾನ್ ಪಾಪ್ಯುಲರ್ ಕಾಂಗ್ರೆಸ್ ಪಾರ್ಟಿ ನೀಡಿರುವ ಹೇಳಿಕೆಯೊಂದು ತಿಳಿಸಿದೆ.

‘‘ರಹಸ್ಯ ಒಪ್ಪಂದಗಳ ಮೂಲಕ ನಮ್ಮ ಜನರನ್ನು ವ್ಯವಸ್ಥಿತವಾಗಿ ಪ್ರತ್ಯೇಕಿಸಲಾಗುತ್ತಿದೆ ಮತ್ತು ದುರ್ಬಲಗೊಳಿಸಲಾಗುತ್ತಿದೆ. ಈ ಶಾಂತಿ ಒಪ್ಪಂದಕ್ಕೆ ಅವರು ಬದ್ಧರಲ್ಲ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News