8 ಪಂದ್ಯಗಳ ಸೋಲು ನೋವು ತಂದಿದೆ: ಧೋನಿ

Update: 2020-10-24 18:55 GMT

ದುಬೈ: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಟಗಾರರಿ ಗೆ ಭಾರಿ ಖರ್ಚು ಮಾಡುವ ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂಕಪಟ್ಟಿಯಲ್ಲಿ ವಿರುದ್ಧ ತುದಿಗಳಲ್ಲಿವೆೆ. ಮುಂಬೈ ಐದನೇ ಪ್ರಶಸ್ತಿಗಾಗಿ ಪ್ರಬಲ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದರೆ, ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಬಾರಿ ಪ್ಲೇ ಆಫ್‌ನಿಂದ ಹೊರಗುಳಿಯುವಂತಾಗಿದೆ.

 ಶುಕ್ರವಾರ ಮುಂಬೈ ಇಂಡಿಯನ್ಸ್ ಎದುರು ಚೆನ್ನೈ ಹೀನಾಯ ಸೋಲು ಅನುಭವಿಸಿತು. ಆಡಿರುವ 11 ಪಂದ್ಯಗಳಲ್ಲಿ ಎಂಟನೇ ಸೋಲು ತುಂಬಾ ನೋವುಂಟು ಮಾಡಿದೆ ಎಂದು ಧೋನಿ ಒಪ್ಪಿಕೊಂಡಿದ್ದಾರೆ.

 ಮೂರು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಅವಮಾನಕರ ಸೋಲಿನ ನಂತರ ತಂಡದಲ್ಲಿ ಪ್ರಮುಖ ಬದಲಾವಣೆಗಳಿಗೆ ಗಮನ ಹರಿಸಲಾಗುವುದು ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

 ಕಳೆದ ಪಂದ್ಯದಲ್ಲಿ ಚೆನ್ನೈಗೆ ಒಂಭತ್ತು ವಿಕೆಟ್ ನಷ್ಟದಲ್ಲಿ ಕೇವಲ 114 ರನ್ ಗಳಿಸಲು ಸಾಧ್ಯವಾಯಿತು. ಹಾಲಿ ಚಾಂಪಿಯನ್ ಮುಂಬೈ 12.2 ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ಚೆನ್ನೈಗೆ ಸೋಲುಣಿಸಿತ್ತು.

 ಧೋನಿ, ಶೇನ್ ವ್ಯಾಟ್ಸನ್ ಮತ್ತು ಎಫ್ ಡು ಪ್ಲೆಸಿಸ್ ಸೇರಿದಂತೆ 35ವರ್ಷ ಮೀರಿದ ಹಲವು ಆಟಗಾರರನ್ನು ಬಳಸಿಕೊಳ್ಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಾಧ್ಯಮಗಳು ಡ್ಯಾಡ್ ಆರ್ಮಿ( ಅಪ್ಪನ ಸೈನ್ಯ) ಎಂದು ಅಡ್ಡ ಹೆಸರಿನಿಂದ ಕರೆಯುತ್ತ್ತಿವೆ. ಅದು ಇನ್ನು ಬದಲಾಗಲಿದೆ. ಆಗಸ್ಟ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ 39ರ ಹರೆಯದ ಧೋನಿ ಎಂದು ಹೇಳಿದರು.

‘‘ಮುಂದಿನ ವರ್ಷದ ತಯಾರಿಗಾಗಿ ಕೆಲವು ಯುವ ಆಟಗಾರರನ್ನು ಬಳಸಿಕೊಳ್ಳಲಾಗುವುದು. ಯಾರು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ, ಯಾರು ಸರಿಯಾಗಿ ಬೌಲಿಂಗ್‌ನಡೆಸುತ್ತಾರೆ ಮತ್ತು ಒತ್ತಡವನ್ನು ನಿಭಾಯಿಸಿಕೊಂಡು ಆಡುತ್ತಾರೆ ಎನ್ನುವುದನ್ನು ನೋಡಲಾಗುವುದು. ಬೆಂಚ್‌ನಲ್ಲಿರುವ ಕೆಲವರು ಉಳಿದ ಮೂರು ಪಂದ್ಯಗಳಲ್ಲಿ ಅವಕಾಶ ಪಡೆಯುತ್ತಾರೆ’’ಎಂದು ಧೋನಿ ಹೇಳಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ವ್ಯಾಟ್ಸನ್‌ರನ್ನು ಕೈಬಿಡಲಾಯಿತು. ಆದರೆ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಅವರನ್ನು ಕಣಕ್ಕಿಳಿಸಲಾಯಿತು. 41ರ ಹರೆಯದ ತಾಹಿರ್ ಈ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನು ಆಡಿದರು.

 ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿದ್ದ ಧೋನಿ ಕಳೆದ ವರ್ಷ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆ ಬಳಿಕ ಟೀಮ್ ಇಂಡಿಯಾದಿಂದ ದೂರವಾದ ಅವರು ಕಳೆದ ಆಗಸ್ಟ್ 15ರಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News