ಏಶ್ಯನ್ ಆನ್‌ಲೆನ್ ಚೆಸ್: ಭಾರತ ಫೈನಲ್‌ಗೆ

Update: 2020-10-24 18:46 GMT

ಚೆನ್ನೈ: ಏಶ್ಯನ್‌ಆನ್‌ಲೈನ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡ ಫೈನಲ್ ಪ್ರವೇಶಿಸಿದೆ.

 ಅಗ್ರ ಶ್ರೇಯಾಂಕಿತ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಶನಿವಾರ ಕ್ರಮವಾಗಿ ಕಝಕಿಸ್ತಾನ್ ಮತ್ತು ಮಂಗೋಲಿಯಾ ವಿರುದ್ಧ ಜಯಗಳಿಸಿ ಫೈನಲ್ ಪ್ರವೇಶಿಸಿದವು. ಪಂದ್ಯದಲ್ಲಿ ಬಿ.ಅಧಿಪನ್ ಮತ್ತು ಆರ್.ವೈಶಾಲಿ ಮಿಂಚಿದರು.

ಪುರುಷರ ತಂಡ ಕಝಕಿಸ್ತಾನವನ್ನು 2.5-1.5 ಮತ್ತು 3-1 ಅಂತರದಿಂದ ಸೋಲಿಸಿದರೆ, ಮಹಿಳಾ ತಂಡವು ಮಂಗೋಲಿಯಾ ವಿರುದ್ಧ 3.5-0.5 ಮತ್ತು 4-0 ಅಂತರದಿಂದ ಜಯಗಳಿಸಿತು.

ಬಿ.ಅಧಿಪನ್ ತಮ್ಮ ಎರಡೂ ಪಂದ್ಯಗಳಲ್ಲಿ ರಿನಾತ್ ಜುಮಾಬಾಯೆವ್‌ರನ್ನು ಸೋಲಿಸಿದರು. ಮೊದಲ ಪಂದ್ಯದಲ್ಲಿ ಭಾರತದ ಅಧಿಪನ್ ಗೆಲುವು ದಾಖಲಿಸಿದರೆ, ನಿಹಾಲ್ ಸರಿನ್, ಎಸ್.ಪಿ. ಸೇತುರಾಮನ್ ಮತ್ತು ಕೆ.ಶಶಿಕಿರಣ್ ಡ್ರಾ ಸಾಧಿಸಿದರು.

ಎರಡನೇ ಪಂದ್ಯದಲ್ಲಿ, ಅಧಿಪನ್, ಸರಿನ್ ಮತ್ತು ಸೇತುರಾಮನ್ ತಮ್ಮ ಪಂದ್ಯಗಳಲ್ಲಿ ಗೆದ್ದರು. ಆದರೆ ಶಶಿಕಿರಣ್ ಅವರು ಡೆನಿಸ್ ಮಖ್ನೇವ್ ಅವರ ಕೈಯಲ್ಲಿ ಸೋಲನ್ನು ಅನುಭವಿಸಿದರು.

ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಸೂರ್ಯ ಶೇಖರ್ ಗಂಗುಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಗಂಗುಲಿ ಶನಿವಾರ ಯಾವುದೇ ಪಂದ್ಯವನ್ನು ಆಡಲಿಲ್ಲ.

  ಮಹಿಳೆಯರ ವಿಭಾಗದಲ್ಲಿ ಭಾರತದ ತಂಡ ಎರಡೂ ಪಂದ್ಯಗಳಲ್ಲೂ ಜಯ ಗಳಿಸಿತು. ಆರ್. ವೈಶಾಲಿ ಅವರು ಭಟ್ಕುಯಾಂಗ್ ಮುಂಗುಂಟುಲ್ ವಿರುದ್ಧ ತನ್ನ ಎರಡೂ ಪಂದ್ಯಗಳನ್ನು ಗೆದ್ದರು.

  ವುಮನ್ ಗ್ರಾಂಡ್ ಮಾಸ್ಟರ್ ಮೇರಿ ಆ್ಯನ್ ಗೋಮ್ಸ್ ನೇತೃತ್ವದ ಭಾರತ ತಂಡವು ರವಿವಾರ ನಡೆಯುವ ಫೈನಲ್‌ನಲ್ಲಿ ಇಂಡೊನೇಶ್ಯವನ್ನು ಎದುರಿಸಲಿದೆ.

 ಪದ್ಮಿನಿ ರಾವುತ್ ಮತ್ತು ಪಿ.ವಿ. ನಂದಿತಾ ಮೊದಲ ಪಂದ್ಯದಲ್ಲಿ ಎದುರಾಳಿಗಳ ವಿರುದ್ಧ ಜಯಗಳನ್ನು ದಾಖಲಿಸಿದರೆ, ಗೋಮ್ಸ್ ಡ್ರಾದಲ್ಲಿ ತೃಪ್ತಿಪಟ್ಟು ಕೊಂಡರು. ಎರಡನೇ ಪಂದ್ಯದಲ್ಲಿ ವೈಶಾಲಿ, ಭಕ್ತಿ ಕುಲಕರ್ಣಿ, ರಾವುತ್ ಮತ್ತು ನಂದಿತಾ ಗೆಲುವಿನ ನಗೆ ಬೀರಿದರು. ಭಾರತದ ತಂಡ 4-0 ಅಂತರದಲ್ಲಿ ಜಯಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News