ಶಾಲೆಯಲ್ಲಿ ಗುಂಡಿನ ದಾಳಿ : ಎಂಟು ಮಕ್ಕಳು ಬಲಿ

Update: 2020-10-25 03:50 GMT

ಕುಂಬಾ (ಕ್ಯಾಮರೂನ್) : ಬಂದೂಕು ಹಾಗು ಮಚ್ಚು ಹಿಡಿದ ದಾಳಿಕೋರರು ನೈರುತ್ಯ ಕ್ಯಾಮರೂನ್‌ನ ಶಾಲೆಯೊಂದರ ಮೇಲೆ ದಾಳಿ ಮಾಡಿ ಎಂಟು ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ.

ಕುಂಬಾದ ದ್ವಿಭಾಷಿ ಶಾಲೆಯ ಮೇಲೆ ನಡೆದ ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ. ಆದರೆ ಈ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಆಂಗ್ಲೋಫೋನ್ ಪ್ರತ್ಯೇಕತಾವಾದಿಗಳು ಮತ್ತು ಸರ್ಕಾರಿ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದೆ.

"ಮದರ್ ಫ್ರಾನ್ಸಿಸ್ಕಾ ಇಂಟರ್‌ನ್ಯಾಷನಲ್ ಬೈಲಿಂಗ್ವನ್ ಅಕಾಡಮಿಯಲ್ಲಿ ನಡೆದ ಬಂದೂಕು ಮತ್ತು ಮಚ್ಚಿನ ದಾಳಿಯಲ್ಲಿ ಕನಿಷ್ಠ ಎಂಟು ಮಕ್ಕಳು ಮೃತಪಟ್ಟಿದ್ದಾರೆ" ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸ್ಥಳೀಯ ಕಚೇರಿ ಪ್ರಕಟಣೆ ನೀಡಿದೆ.

ಘಟನೆಯಲ್ಲಿ ಇತರ 12 ಮಕ್ಕಳು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದುವರೆಗೆ ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

ಇಂಗ್ಲಿಷ್ ಮಾತನಾಡುವ ಕ್ಯಾಮರೂನ್‌ನ ಆಗ್ನೇಯ ಹಾಗೂ ನೈರುತ್ಯ ಪ್ರಾಂತ್ಯಗಳು, ದೇಶದ ಫ್ರೆಂಚ್ ಮಾತನಾಡುವ ಬಹುಸಂಖ್ಯಾತರ ವಿರುದ್ಧ ತಾರತಮ್ಯದ ಆರೋಪ ಮಾಡುತ್ತಾ ಬಂದಿವೆ. ಈ ಎರಡು ಪ್ರದೇಶಗಳು ಸಂಘರ್ಷದ ಕೇಂದ್ರಬಿಂದುವಾಗಿದ್ದು, ಪ್ರತ್ಯೇಕತಾವಾದಿ ಉಗ್ರರು ಸೇನೆಯನ್ನು ಗುರಿ ಮಾಡಿದ್ದಾರೆ. ಸ್ಥಳೀಯ ಸರ್ಕಾರಿ ಕಚೇರಿಗಳನ್ನು ಹಾಗೂ ಶಾಲೆಗಳನ್ನು ಮುಚ್ಚುವಂತೆ ಆಗ್ರಹಿಸಿದ್ದರು.
ಇದುವರೆಗೆ ಹೋರಾಟದಲ್ಲಿ 3000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 2017ರಿಂದೀಚೆಗೆ ಸುಮಾರು 7 ಲಕ್ಷ ಮಂದಿ ಮನೆ ಮಠಗಳನ್ನು ತೊರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News