ಸೈನಿಕರಿಗಾಗಿ ದೀಪ ಬೆಳಗಿಸಿ: ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಸಂದೇಶ

Update: 2020-10-25 07:09 GMT

ಹೊಸದಿಲ್ಲಿ: ಭಾರತವು ದೇಶದ ಕೆಚ್ಚೆದೆಯ ಸೈನಿಕರು ಹಾಗೂ ಭದ್ರತಾ ಪಡೆಯೊಂದಿಗೆ ದೃಢವಾಗಿ ನಿಂತಿದೆ. ಸಾಂಕ್ರಾಮಿಕ ಸಮಯದಲ್ಲಿ ಹಬ್ಬಗಳನ್ನು ಆಚರಿಸುವಾಗ ಸೈನಿಕರಿಗೆ ದೀಪ ಬೆಳಗಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದರು.

ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದೇಶದ ಜನರು ಬಾಹ್ಯ ಬೆದರಿಕೆಗಳಿಂದ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ದೇಶದ ಗಡಿ ಭಾಗಗಳನ್ನು ಕಾಪಾಡುತ್ತಿರುವ ಸೈನಿಕರು ತಮ್ಮ ಕುಟುಂಬದಿಂದ ದೂರವಿರುತ್ತಾರೆ. ವರ್ಷದ ಈ ಸಮಯದಲ್ಲಿ ಈದ್, ದೀಪಾವಳಿಯಂತಹ ಹಲವಾರು ಉತ್ಸವಗಳು ನಡೆಯಲಿವೆ. ಈ ಹಬ್ಬಗಳ ಸಮಯದಲ್ಲಿ ಗಡಿಯಲ್ಲಿ ನಿಂತಿರುವ ನಮ್ಮ ಧೈರ್ಯಶಾಲಿ ಸೈನಿಕರನ್ನು ಸಹ ನಾವು ನೆನಪಿಟ್ಟುಕೊಳ್ಳಬೇಕು. ಮದರ್ ಇಂಡಿಯಾದ ಧೈರ್ಯಶಾಲಿ ಪುತ್ರ ಹಾಗೂ ಪುತ್ರಿಯರ ಗೌರವಾರ್ಥವಾಗಿ ನಾವು ಮನೆಯಲ್ಲಿ ದೀಪವನ್ನು ಬೆಳಗಿಸಬೇಕು'' ಎಂದು ಕರೆ ನೀಡಿದರು.

ಚೀನಾದೊಂದಿಗೆ ಭಾರತ ಗಡಿ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲೇ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಸಿಕ್ಕಿಂ ಹಾಗೂ ಅರುಣಾಚಲ ವಲಯಗಳು ಸೇರಿದಂತೆ 3,500 ಕಿ.ಮೀ. ಉದ್ದದ ಗಡಿಯಲ್ಲಿ ಸೇನೆಯು ತನ್ನ ಸೈನ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ಗಮನಾರ್ಹವಾಗಿ ಬಲಪಡಿಸಿದೆ. ಉಭಯ ದೇಶಗಳ ಮಧ್ಯೆ ಹಲವಾರು ಹಂತದ ಮಾತುಕತೆಯ ಹೊರತಾಗಿಯೂ ಲಡಾಖ್‌ನಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News