ಕರಾವಳಿಯಲ್ಲಿ ಆಯುಧ ಪೂಜೆ, ವಿಜಯ ದಶಮಿ ಸಂಭ್ರಮ

Update: 2020-10-25 07:02 GMT

ಮಂಗಳೂರು, ಅ. 25: ನಗರ ಸಹಿತ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವದ ವಿಜೃಂಭಣೆಯ ಮಧ್ಯೆಯೇ ರವಿವಾರ ಎಲ್ಲೆಡೆ ಆಯುಧ ಪೂಜೆ, ವಿಜಯ ದಶಮಿಯ ಸಂಭ್ರಮ ಕಂಡು ಬಂತು.

ಸರಕಾರಿ ಮತ್ತು ಬಹುತೇಕ ಖಾಸಗಿ ಸಂಸ್ಥೆಗಳ ಕಚೇರಿಗಳಲ್ಲಿ ಶನಿವಾರವೇ ಪೂಜೆ ಪುನಸ್ಕಾರ ಮಾಡಲಾಗಿತ್ತು. ನಗರದ ಅಂಗಡಿ, ಮಾಲ್ ಹಾಗೂ ಗ್ಯಾರೇಜ್‌ಗಳಲ್ಲದೆ ಕುದ್ರೋಳಿ, ಕದ್ರಿ, ಮಂಗಳಾದೇವಿ, ಶರವು ದೇವಸ್ಥಾನಗಳ ಸಹಿತ ಎಲ್ಲೆಡೆ ಮುಂಜಾನೆಯಿಂದಲೇ ವಿಶೇಷ ಪೂಜೆ-ಪುನಸ್ಕಾರ ನಡೆಯಿತು. ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಪಾಡಲು ಜಿಲ್ಲಾಡಳಿತ ಸ್ಪಷ್ಟ ಸೂಚನೆ ನೀಡಿದ ಕಾರಣ ಅನೇಕ ಕಡೆ ಜನಜಂಗುಳಿ ಕಂಡು ಬಂದಿಲ್ಲ.

ಸರಕಾರಿ ಮತ್ತು ಖಾಸಗಿ ಬಸ್‌ಗಳ ಸಹಿತ ಇತರ ವಾಹನಗಳನ್ನು ಹೂವಿನಿಂದ ಅಲಂಕರಿಸಲಾಗಿದೆ. ಬೆಲೆ ಏರಿಕೆಯ ಮಧ್ಯೆಯೂ ಶನಿವಾರವೇ ಹೂ, ಹಣ್ಣು ಹಂಪಲು, ತರಕಾರಿ ಖರೀದಿಗೆ ಮುಗಿಬಿದ್ದಿದ್ದ ಗ್ರಾಹಕರು ರವಿವಾರವೂ ಅವುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ರಸ್ತೆ ಬದಿ ಸೇವಂತಿಗೆ ಹೂವಿನ ಮಾರಾಟ ಬಿರುಸಾಗಿಯೇ ನಡೆಯುತ್ತಿವೆ. ಸೇವಂತಿಯ ಜೊತೆಗೆ ಮಲ್ಲಿಗೆ ಹೂವಿಗೂ ಹೆಚ್ಚು ಬೇಡಿಕೆ ಇದೆ ಎಂದು ಹೂವಿನ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಆಯುಧ ಪೂಜೆಗೆ ಲಿಂಬೆಹಣ್ಣು ಮತ್ತು ಹಸಿ ಮೆಣಸಿನ ಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಶನಿವಾರದಂತೆ ರವಿವಾರ ಮುಂಜಾನೆಯೂ ಅವುಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಎಂದು ಸ್ಟೇಟ್‌ಬ್ಯಾಂಕ್ ಸಮೀಪದ ಬೀದಿಬದಿ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News