9 ಪತ್ರಕರ್ತರಿಗೆ ನಿಷೇಧ ಹೇರಿದ ಇಂಡಿಗೊ ವಿಮಾನಯಾನ ಸಂಸ್ಥೆ

Update: 2020-10-25 07:27 GMT

ಹೊಸದಿಲ್ಲಿ: ಸೆಪ್ಟಂಬರ್ 9ರಂದು ವಿಮಾನದೊಳಗೆ ಅಶಿಸ್ತಿನ ವರ್ತನೆ ತೋರಿದ್ದ ಪತ್ರಕರ್ತರ ನಡವಳಿಕೆಯನ್ನು ಪರಿಶೀಲಿಸಲು ರಚಿಸಲಾದ ಆಂತರಿಕ ಸಮಿತಿಯ ಶಿಫಾರಸಿನ ಮೇರೆಗೆ ದೇಶದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಒಂಭತ್ತು ಪತ್ರಕರ್ತರನ್ನು ಅಕ್ಟೋಬರ್ 15ರಿಂದ 30ರ ತನಕ ವಿಮಾನದಲ್ಲಿ ಪ್ರಯಾಣಿಸದಂತೆ ನಿಷೇಧ ವಿಧಿಸಿದೆ.

 ಸೆಪ್ಟಂಬರ್ 9ರಂದು ಚಂಡಿಗಢದಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಚಲನಚಿತ್ರ ನಟಿ ಕಂಗನಾ ರಣಾವತ್ ಪ್ರಯಾಣಿಸುತ್ತಿದ್ದ ವೇಳೆ ಟಿವಿ ಪತ್ರಕರ್ತರು ಸುರಕ್ಷಿತ ಅಂತರ ಹಾಗೂ ಸುರಕ್ಷ ಶಿಷ್ಟಾಚಾರವನ್ನು ಉಲ್ಲಂಘನೆಗೆ ಸಾಕ್ಷಿಯಾಗಿದ್ದಾರೆ ಎಂದು ವಿಮಾನಯಾನ ಸುರಕ್ಷತಾ ನಿಯಂತ್ರಕ ಡಿಜಿಸಿಎಗೆ ವಿಮಾನಯಾನ ಸಂಸ್ಥೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಇಂಡಿಗೊ ವಿಮಾನದಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಅಶಿಸ್ತಿನ ವರ್ತನೆಯನ್ನು ತೋರಿಸುತ್ತಿರುವ ವೀಡಿಯೊ ಬಹಿರಂಗವಾದ ಬಳಿಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್(ಡಿಜಿಸಿಎ)ವಿಮಾನಯಾನ ಸಂಸ್ಥೆಗಳಿಗೆ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ದಂಡನಾತ್ಮಕ ಕ್ರಮಗಳನ್ನು ಹೊರಡಿಸಿತ್ತು. ನಿಗದಿತ ವಿಮಾನದಲ್ಲಿ ಯಾವುದೇ ಉಲ್ಲಂಘನೆ ಆಗಿದ್ದರೆ ಈ ವಿಮಾನವನ್ನು ಎರಡು ವಾರಗಳವರೆಗೆ ಸ್ಥಗಿತಗೊಳಿಸಲಾಗುವುದು ಹಾಗೂ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ವಿಮಾನಯಾನವು ಅಗತ್ಯವಿರುವ ದಂಡನಾತ್ಮಕ ಕ್ರಮ ತೆಗೆದುಕೊಂಡ ಬಳಿಕವೇ ವಿಮಾನ ಹಾರಾಟ ಮುಂದುವರಿಸಲು ಅನುಮತಿ ನೀಡಲಾಗುವುದು ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News