ಮಧ್ಯಪ್ರದೇಶ ಉಪ ಚುನಾವಣೆಗೆ ಮೊದಲು ಕಾಂಗ್ರೆಸ್ ಶಾಸಕನ ರಾಜೀನಾಮೆ, ಬಿಜೆಪಿಗೆ ಸೇರ್ಪಡೆ
ಪಾಲ್: ಮಧ್ಯಪ್ರದೇಶದ ಉಪ ಚುನಾವಣೆಗೆ ಮೊದಲು ಕಾಂಗ್ರೆಸ್ ಮತ್ತೊಂದು ಹಿನ್ನಡೆ ಅನುಭವಿಸಿದ್ದು, ಪಕ್ಷದ ಶಾಸಕ ರಾಹುಲ್ ಸಿಂಗ್ ಶಾಸಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಹುಲ್ ಇತ್ತೀಚೆಗೆ ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ ನಾಲ್ಕನೇ ಶಾಸಕನಾಗಿದ್ದಾರೆ.
ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳ ಬಳಿಕ ಭೋಪಾಲ್‌ನಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರಿದರು.
ರಾಹುಲ್ ದಾಮೋಹ್‌ನ ಶಾಸಕನಾಗಿದ್ದು, ಹಂಗಾಮಿ ಸಭಾಪತಿ ರಾಮೇಶ್ವರ ಶರ್ಮಾಗೆ ರಾಜೀನಾಮೆ ಸಲ್ಲಿಸಿದರು. ಸ್ಪೀಕರ್ ರಾಜೀನಾಮೆವನ್ನು ಸ್ವೀಕರಿಸಿದರು.
ದಾಮೋಹ್ ಪ್ರದೇಶದ ಶಾಸಕ ರಾಹುಲ್ ಸಿಂಗ್ ರಾಜೀನಾಮೆ ನೀಡಿದ್ದು ಅದನ್ನು ಸ್ವೀಕರಿಸಲಾಗಿದೆ ಎಂದು ಶರ್ಮಾ ಟ್ವೀಟಿಸಿದ್ದಾರೆ.
"ನಾನು ಕಾಂಗ್ರೆಸ್‌ನೊಂದಿಗೆ 14 ತಿಂಗಳು ಕೆಲಸ ಮಾಡಿದ್ದು, ಯಾವ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಇಂದು ಎಲ್ಲ ಸಾರ್ವಜನಿಕ ಕಲ್ಯಾಣ ಯೋಜನೆಗಳು ಸ್ಥಗಿತವಾಗಿವೆ. ಇಂದು ನಾನು ಬಿಜೆಪಿಗೆ ಸೇರಿದ್ದು, ನನ್ನ ಕ್ಷೇತ್ರ ಮತ್ತಷ್ಟು ಅಭಿವೃದ್ದಿಯಾಗುವ ವಿಶ್ವಾಸವಿದೆ'' ಎಂದು ರಾಹುಲ್ ಹೇಳಿದರು.
ದಾಮೋಹ್ ಕ್ಷೇತ್ರ ತೆರವಾಗುವುದರೊಂದಿಗೆ 230 ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 87ಕ್ಕೆ ಕುಸಿದಿದೆ. ಜುಲೈನಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.