ದೇಶದ ಎಲ್ಲ ಜನರಿಗೂ ಉಚಿತ ಕೋವಿಡ್ ಲಸಿಕೆ ಕೊಡಲಾಗುವುದು: ಕೇಂದ್ರ ಸಚಿವ

Update: 2020-10-26 05:31 GMT

ಭುವನೇಶ್ವರ: ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಿಹಾರದಲ್ಲಿ ಮಾತ್ರವಲ್ಲ, ವಿಪಕ್ಷಗಳ ಬೇಡಿಕೆಯಂತೆ ದೇಶದ ಎಲ್ಲ ನಾಗರಿಕರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ರವಿವಾರ ಹೇಳಿದ್ದಾರೆ.

 ಅ.28ರಿಂದ ವಿಧಾನಸಭಾ ಚುನಾವಣೆ ಆರಂಭವಾಗಲಿರುವ ಬಿಹಾರದಲ್ಲಿ ಉಚಿತ ಕೋವಿಡ್ ಲಸಿಕೆ ಘೋಷಿಸಿದ್ದ ಬಿಜೆಪಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಆಡಳಿ ಪಕ್ಷವು ರಾಜಕೀಯ ಕಾರಣಗಳಿಗಾಗಿ ಸಾಂಕ್ರಾಮಿಕ ರೋಗವನ್ನು ಬಳಸುತ್ತಿದೆ ಎಂದು ವಿಪಕ್ಷಗಳು ಎನ್‌ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಇದು ಚುನಾವಣಾ ಪ್ರಣಾಳಿಕೆ ಘೋಷಣೆಯಾಗಿದ್ದರಿಂದ ಘೋಷಣೆಯು ಕ್ರಮಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಎಲ್ಲಾ ಜನರಿಗೆ ಉಚಿತ ಲಸಿಕೆಗಳನ್ನು ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಪ್ರತಿ ವ್ಯಕ್ತಿಗೆ ಲಸಿಕೆಗಾಗಿ ಅಂದಾಜು 500 ರೂ. ವ್ಯಯಿಸಲಾಗುತ್ತದೆ ಎಂದು ನವೆಂಬರ್ 3ರಂದು ನಡೆಯಲಿರುವ ಬಾಲಸೋರ್ ವಿಧಾನಸಭೆಯ ಉಪ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಾರಂಗಿ ಸುದ್ದಿಗಾರರಿಗೆ ತಿಳಿಸಿದರು.

 ಬಿಹಾರದಲ್ಲಿ ಉಚಿತ ಲಸಿಕೆ ನೀಡುವ ಕುರಿತ ಭರವಸೆಗೆ ಒಡಿಶಾದ ಇಬ್ಬರು ಕೇಂದ್ರ ಸಚಿವರಾದ ದೇವೇಂದ್ರ ಪ್ರಧಾನ್ ಹಾಗೂ ಸಾರಂಗಿ ವೌನ ತಾಳಿದ್ದಾರೆ ಎಂಬ ಒಡಿಶಾದ ಆಹಾರ ಸರಬರಾಜು ಹಾಗೂ ಗ್ರಾಹಕ ಕಲ್ಯಾಣ ಸಚಿವರ ಆರೋಪಕ್ಕೆ ಸಾರಂಗಿ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News