ಕಲ್ಲಿದ್ದಲು ಹಗರಣ: ಮಾಜಿ ಕೇಂದ್ರ ಸಚಿವ ದಿಲಿಪ್ ರೇಗೆ 3 ವರ್ಷಗಳ ಜೈಲು ಶಿಕ್ಷೆ

Update: 2020-10-26 07:59 GMT

ಹೊಸದಿಲ್ಲಿ: 1999ರಲ್ಲಿ ಜಾರ್ಖಂಡ್ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ದಿಲಿಪ್ ರೇ ಅವರಿಗೆ ದಿಲ್ಲಿ ನ್ಯಾಯಾಲಯ ಸೋಮವಾರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ದಿಲಿಪ್ ರೇ ಕಲ್ಲಿದ್ದಲು ಖಾತೆಯ ರಾಜ್ಯ ಸಚಿವರಾಗಿದ್ದರು.

ಸಿಬಿಐ ವಿಶೇಷ ನ್ಯಾಯಾಲಯವು ದಿಲಿಪ್ ರೇ ಅವರಲ್ಲದೆ ಕಲ್ಲಿದ್ದಲು ಸಚಿವಾಲಯದ ಆಗಿನ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಹಾಗೂ ನಿತ್ಯಾನಂದ್ ಗೌತಮ್‌ಗೂ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತು. ಪ್ರತಿಯೊಬ್ಬರಿಗೂ 10 ಲಕ್ಷ ರೂ. ದಂಡ ವಿಧಿಸಿತು. ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿ.ಗೆ 60 ಲಕ್ಷ ರೂ.ಹಾಗೂ ಕ್ಯಾಸ್ಟ್ರಾನ್ ಮೈನಿಂಗ್ ಲಿ.ಗೆ 10 ಲಕ್ಷ ರೂ. ದಂಡ ವಿಧಿಸಿದೆ.ದಿಲಿಪ್ ಈ ತಿಂಗಳಾರಂಭದಲ್ಲಿ ದಿಲ್ಲಿಯ ವಿಶೇಷ ನ್ಯಾಯಾಲಯದಿಂದ ಕ್ರಿಮಿನಲ್ ಪಿತೂರಿ ಹಾಗೂ ಇತರ ಅಪರಾಧಗಳಿಗೆ ಶಿಕ್ಷೆಗೊಳಗಾಗಿದ್ದರು.

 ವಿಶೇಷ ನ್ಯಾಯಾಧೀಶ ಭಾರತ್ ಪರಾಶರ್ ಅವರು ಸಿಬಿಐ ಹಾಗೂ ಅಪರಾಧಿಗಳ ವಾದಗಳನ್ನು ಆಲಿಸಿದ ನಂತರ ಅಕ್ಟೋಬರ್ 26ಕ್ಕೆ ಆದೇಶವನ್ನು ಕಾಯ್ದಿರಿಸಿದ್ದರು. ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಹಾಗೂ ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ ನಿರ್ದೇಶಕ ಮಹೇಂದ್ರ ಕುಮಾರ್ ಸೇರಿದಂತೆ ಮಾಜಿ ಕೇಂದ್ರ ಸಚಿವರು ಹಾಗೂ ಇತರ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಸಿಬಿಐ ಕೋರಿಕೆ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News