ಮಂಗಳೂರು ವಿಶ್ವವಿದ್ಯಾನಿಲಯ: ಡಿಸೆಂಬರ್‌ನಿಂದ ಸ್ನಾತಕೋತ್ತರ ತರಗತಿಗಳು ಆರಂಭ?

Update: 2020-10-26 07:16 GMT

ಮಂಗಳೂರು, ಅ.26: ರಾಜ್ಯದಲ್ಲಿ ನವೆಂಬರ್ 17ರಿಂದ ಪದವಿ ಹಾಗೂ ಡಿಪ್ಲೊಮಾ ತರಗತಿಗಳು ಆರಂಭಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ ನೀಡಿರುವಂತೆಯೇ, ಮಂಗಳೂರು ವಿಶ್ವವಿದ್ಯಾನಿಲಯವು ಡಿಸೆಂಬರ್ ಮೊದಲ ವಾರದಿಂದ ಸ್ನಾತಕೋತ್ತರ ತರಗತಿ ಆರಂಭಿಸುವ ಚಿಂತನೆ ನಡೆಸಿದೆ. 

ನವೆಂಬರ್ 15ರೊಳಗೆ ಫಲಿತಾಂಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸ್ನಾತಕೋತ್ತರ ತರಗತಿಗಳ ಪ್ರವೇಶಾತಿಯನ್ನು ಆರಂಭಿಸಲಿದೆ. ಪ್ರವೇಶಾತಿ ಪ್ರಕ್ರಿಯೆ ಮುಗಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೊದಲ ವರ್ಷದ ಸ್ನಾತಕೋತ್ತರ ತರಗತಿ ಆರಂಭಿಸುವ ನಿರೀಕ್ಷೆ ಇದೆ.

ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿ ಆಯ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರದ್ದಾಗಿರುತ್ತದೆ. ಸರಕಾರ, ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗಗಳ ನಿರ್ದೇಶನ ಹಾಗೂ ಸ್ಥಳೀಯವಾಗಿ ಕೋವಿಡ್ ಪ್ರಕರಣಗಳ ಸ್ಥಿತಿಗತಿ ಅವಲೋಕಿಸಿ ದಿನಾಂಕ ನಿರ್ಧರಿಸುವುದಾಗಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಹಾಜರಾತಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಸದ್ಯ ಎರಡು ಮಾದರಿಯನ್ನು ವಿಶ್ವವಿದ್ಯಾನಿಲಯ ಚಿಂತಿಸಿದ್ದು, ಕಾಲೇಜುಗಳು ಸೂಕ್ತ ಆಯ್ಕೆ ಮಾಡಬಹುದು. ಪರ್ಯಾಯ ದಿನಗಳಲ್ಲಿ ಆಫ್‌ಲೈನ್ ಹಾಗೂ ಆನ್‌ಲೈನ್ ತರಗತಿಗಳನ್ನು ನಡೆಸುವುದು ಅಥವಾ ಆಫ್‌ಲೈನ್ ತರಗತಿಯನ್ನು ವರ್ಚುವಲ್ ಪ್ರಸಾರ ಮಾಡುವ ಮೂಲಕ ಏಕಕಾಲಕ್ಕೆ ಆಫ್‌ಲೈನ್ ಹಾಗೂ ಆನ್‌ಲೈನ್ ತರಗತಿ ನಡೆಸಬಹುದಾಗಿದೆ.

ಆಫ್‌ಲೈನ್ ತರಗತಿಗಳಲ್ಲಿ ಅಂತರ ಹಾಗೂ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗುವುದು. ಅದಕ್ಕಾಗಿ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ನಿಗದಿಪಡಿಸಲಾಗುವುದು. ಈ ಸಂದರ್ಭ ಹೆಚ್ಚುವರಿ ತರಗತಿ ನಡೆಸಬೇಕಾಗುತ್ತದೆ. ಪ್ರಾಧ್ಯಾಪಕರ ಮೇಲೆ ಒತ್ತಡ ಬೀಳಬಹುದು. ಅದನ್ನು ತಪ್ಪಿಸಲು ಪರ್ಯಾಯ ದಿನಗಳಲ್ಲಿ ಆನ್‌ಲೈನ್ ತರಗತಿಗೆ ಆದ್ಯತೆ ನೀಡುವುದು ವಿಶ್ವವಿದ್ಯಾನಿಲಯದ ಉದ್ದೇಶವಾಗಿದೆ.

ಪದವಿಯ 2ನೇ ಮತ್ತು 3ನೇ ವರ್ಷದ ತರಗತಿಗಳು ಆನ್‌ಲೈನ್ ಮೂಲಕ ಈಗಾಗಲೇ ಆರಂಭಗೊಂಡಿವೆ. ಅವರಿಗೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಪ್ರಥಮ ವರ್ಷದ ಸ್ನಾತಕೋತ್ತರಕ್ಕೆ ಸ್ವಲ್ಪ ವಿಳಂಬವಾಗಬಹುದು. ಇದರಿಂದ ಎಲ್ಲ ವರ್ಷದ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ ಎಂದು ಪ್ರೊ.ಯಡಪಡಿತ್ತಾಯ ಅಭಿಪ್ರಾಯಿಸಿದ್ದಾರೆ.

ಅರ್ಜಿ ಆಹ್ವಾನ

ಮಂಗಳೂರು ವಿಶ್ವವಿದ್ಯಾನಿಲಯ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಐದು ಕೇಂದ್ರಗಳಲ್ಲಿನ ಕಲಾ, ವಾಣಿಜ್ಯ, ಆಡಳಿತ ಮತ್ತು ನಿರ್ವಹಣೆ, ವಿಜ್ಞಾನ ವಿಭಾಗಗಳ ವಿವಿಧ ವಿಷಯಗಳ ಸ್ನಾತಕೋತ್ತರ, ಪಿಜಿ ಡಿಪ್ಲೊಮಾ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಂಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾನಿಲಯದ ವೆಬ್‌ಸೈಟ್ mangaloreuniversity.ac.in/pg.admission-notification-academic-year-2020-21ನಲ್ಲಿ ಮಾಹಿತಿ ಮತ್ತು ಅರ್ಜಿ ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News