ಬಿಹಾರ: ಬಿಜೆಪಿ ಪೋಸ್ಟರ್ ಗಳಲ್ಲಿ ಸಿಎಂ ನಿತೀಶ್ ಕುಮಾರ್ ಚಿತ್ರಗಳಿಲ್ಲ

Update: 2020-10-26 11:39 GMT

ಪಾಟ್ನಾ : ಬಿಹಾರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲು ಇನ್ನೇನು ಮೂರು ದಿನಗಳಿವೆಯೆನ್ನುವಾಗ ಬಿಜೆಪಿ  ರಾಜ್ಯಾದ್ಯಂತ ಹಾಕಿರುವ ಬೃಹತ್ ಗಾತ್ರದ ಪೋಸ್ಟರ್‍ಗಳಲ್ಲಿ ಕೇವಲ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ಮಾತ್ರ ಹಾಕಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಕ್ಷ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿಯ ಹೆಸರಿನಲ್ಲಿಯೇ  ಮತಗಳನ್ನು ಯಾಚಿಸಲಿದೆ ಎಂದು ಈ ಪೋಸ್ಟರ್‍ಗಳು ಸೂಚಿಸುತ್ತಿವೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಪೋಸ್ಟರ್‍ಗಳಲ್ಲಿ ಎನ್‍ಡಿಎ ಮೈತ್ರಿ ಕೂಟದಲ್ಲಿರುವ ಪಕ್ಷಗಳ ಚಿಹ್ನೆಗಳನ್ನು ಮಾತ್ರ ನೀಡಲಾಗಿದೆ.

ಪ್ರಧಾನಿ ತಮ್ಮ ಎರಡನೇ ಹಂತದ ಪ್ರಚಾರದ ಭಾಗವಾಗಿ ಅಕ್ಟೋಬರ್ 28ರಂದು ಪಾಟ್ನಾ, ದರ್ಭಾಂಗ ಮತ್ತು ಮುಝಫ್ಫರಪುರದಲ್ಲಿ ರ್ಯಾಲಿಗಳಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರವಿಲ್ಲದ ಈ ಪೋಸ್ಟರ್‍ಗಳು ಸಾಕಷ್ಟು ಕುತೂಹಲ ಕೆರಳಿಸಿವೆ.

ಅತ್ತ ನಿತೀಶ್ ಕುಮಾರ್ ಅವರ ಜೆಡಿ(ಯು) ಬಿಡುಗಡೆ ಮಾಡಿರುವ ಪೋಸ್ಟರ್‍ಗಳಲ್ಲಿ ನಿತೀಶ್ ಹಾಗೂ ಪ್ರಧಾನಿ ಮೋದಿಯ ಚಿತ್ರಗಳಿವೆ.

ಬಿಜೆಪಿಯ ಪೋಸ್ಟರ್‍ಗಳಲ್ಲಿ ನಿತೀಶ್ ಅವರ ಚಿತ್ರವಿಲ್ಲದೇ ಇರುವ ಕುರಿತು ಬಿಜೆಪಿ ಹಾಗೂ ಜೆಡಿಯು ಕಾರ್ಯಕರ್ತರು ಮೌನ ವಹಿಸಿದ್ದಾರೆ.

ಬಿಜೆಪಿಯ ಪೋಸ್ಟರ್‍ಗಳಲ್ಲಿ ಏಳು ಪ್ರಗತಿ ಅಂಶಗಳನ್ನು ಉಲ್ಲೇಖಿಸಲಾಗಿದ್ದು  ಎಂಟನೆಯ ಅಂಶದಲ್ಲಿ ``ಪ್ರಾಮಾಣಿಕವಾಗಿ ಕೆಲಸ ಮಾಡುವವರು ಭವಿಷ್ಯದಲ್ಲೂ ಹಾಗೆಯೇ ಮಾಡುತ್ತಾರೆ,'' ಎಂಬ ಪ್ರಧಾನಿಯ ಸಂದೇಶವಿದೆ.  ಭಾಜಪಾ ಹೈ ತೋ ಭರೋಸಾ ಹೈ (ಬಿಜೆಪಿ ಇರುವಲ್ಲಿ ನಂಬಿಕೆ ಇದೆ) ಎಂಬ ಘೊಷವಾಕ್ಯವೂ ಈ ಪೋಸ್ಟರ್‍ನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News