ನ. 26ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿ: ಕೆ.ಶಂಕರ್ ಕರೆ

Update: 2020-10-26 13:25 GMT

ಬೈಂದೂರು, ಅ.26: ಶಿಕ್ಷಣ, ಆರೋಗ್ಯ, ಕೃಷಿ, ಸಾರ್ವಜನಿಕ ಉದ್ಯಮ ಗಳಾದ ವಿಮೆ, ದೂರ ಸಂಪರ್ಕ, ಬ್ಯಾಂಕ್, ರಕ್ಷಣೆಯಂತಹ ಆಯಕಟ್ಟಿನ ರಂಗಗಳು ಕಾರ್ಪೊರೇಟ್ ಧಣಿಗಳ ಕೈವಶವಾಗುವುದನ್ನು ಮತ್ತು ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ನ.26ರಂದು ಜರಗುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೈಂದೂರು ತಾಲೂಕು ಸಿಐಟಿಯು, ಸ್ಥಳೀಯ ಇತರ ಕಾರ್ಮಿಕ ಸಂಘಗಳ ಜೊತೆ ಸೇರಿ ಯಶಸ್ವಿಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ ಹೇಳಿದ್ದಾರೆ.

ಸಿಐಟಿಯುಗೆ ಸಂಯೋಜಿಸಲ್ಪಟ್ಟ ಕಾರ್ಮಿಕ ಸಂಘಗಳ ಆಶ್ರಯದಲ್ಲಿ ಸೋಮವಾರ ಬೈಂದೂರು ಸಿಐಟಿಯು ಕಚೇರಿಯಲ್ಲಿ ಆಯೋಜಿಸಲಾದ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೋಟ್ಯಾಂತರ ಜನರ ಬೆವರು ಮತ್ತು ರಕ್ತದಿಂದ ಹಾಗೂ ದೇಶದ ತೆರಿಗೆ ಹಣದಿಂದ ಕಟ್ಟಲ್ಪಟ್ಟ ಈ ಸಾರ್ವಜನಿಕ ವ್ಯವಸ್ಥೆಗಳನ್ನು ಸರಕಾರ ಖಾಸಗೀಕರಣಗೊಳಿಸುತ್ತಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆ ರಾಜಿ ರಹಿತ ಹೋರಾಟ ಮಾಡಲಿದೆ ಎಂದರು.

ರೈತ, ಕಾರ್ಮಿಕ ಹಾಗೂ ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ಅವರಿಗೆ ಮುಖಂಡ ವೆಂಕಟೇಶ ಕೋಣಿ ನುಡಿ ನಮನ ಸಲ್ಲಿಸಿದರು. ಕಾರ್ಮಿಕ ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಬಿಜೂರು, ರಾಜೀವ ಪಡು ಕೋಣೆ, ಮಾಧವ ದೇವಾಡಿಗ ಉಪ್ಪುಂದ, ಶ್ರೀಧರ ದೇವಾಡಿಗ ಉಪ್ಪುಂದ, ಅಮ್ಮಯ್ಯ ಪೂಜಾರಿ ಬಿಜೂರು, ರಾಮ ಕಂಬದಕೋಣೆ, ನಾಗರತ್ನ ನಾ ಮೊದಲಾದವರು ಉಪಸ್ಥಿತರಿದ್ದರು

ಸಿಐಟಿಯು ಬೈಂದೂರು ತಾಲೂಕು ಸಂಚಾಲಕ ಉದಯ ಗಾಣಿಗ ಮೊಗೇರಿ ಅಧ್ಯಕ್ಷತೆ ವಹಿಸಿದ್ದರು. ಗಣೇಶ ತೊಂಡೆಮಕ್ಕಿ ಸ್ವಾಗತಿಸಿದರು. ಶೀಲಾವತಿ ಹಡವು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News