ಸಿದ್ಧಾಂತ, ಸಂಸ್ಕೃತಿಗೆ ತಿಲಾಂಜಲಿ ನೀಡಿರುವ ಬಿಜೆಪಿ : ಉದ್ಧವ್ ಠಾಕ್ರೆ ಟೀಕೆ

Update: 2020-10-26 14:40 GMT

ಮುಂಬೈ, ಅ.26: ನಿಮ್ಮ ಅಡಿಪಾಯದ ಕಲ್ಲು ದುರ್ಬಲವಾಗುತ್ತಿದ್ದು ನಿಮ್ಮಲ್ಲಿ ಈಗ ಯಾವುದೇ ಸಿದ್ಧಾಂತ, ಆದರ್ಶ ಅಥವಾ ಸಂಸ್ಕೃತಿ ಉಳಿದಿಲ್ಲ. ಇಂತಹ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಜನತೆ ಈಗ ಭ್ರಮನಿರಸನಗೊಂಡಿದ್ದಾರೆ ಎಂದು ಶಿವಸೇನೆಯ ಮುಖಂಡ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ದಾದರ್‌ನ ಶಿವಾಜಿ ಪಾರ್ಕ್ ಬಳಿಯ ಸಾವರ್ಕರ್ ಸ್ಮಾರಕ ಸಭಾಂಗಣದಿಂದ ಆರಂಭವಾದ ಶಿವಸೇನೆಯ ವಾರ್ಷಿಕ ದಸರಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಠಾಕ್ರೆ, ಬಿಜೆಪಿ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿದಳ ಹಾಗೂ ಹಿರಿಯ ಸದಸ್ಯ ಏಕನಾಥ್ ಖಡ್ಸೆ ಹೊರನಡೆದಿರುವುದರಿಂದ ಎನ್‌ಡಿಎ ಮೈತ್ರಿಕೂಟದ ಅಡಿಪಾಯದ ಕಲ್ಲು ಶಿಥಿಲಗೊಂಡಿದೆ. ಯಾವುದೇ ಕ್ಷಣದಲ್ಲೂ ಕುಸಿದು ಬೀಳಬಹುದು ಎಂದರು. ಕೇಂದ್ರ ಸರಕಾರದಿಂದ ಮಹಾರಾಷ್ಟ್ರಕ್ಕೆ 38,000 ಕೋಟಿ ರೂ. ಜಿಎಸ್‌ಟಿ ಪಾಲು ಪಾವತಿಗೆ ಬಾಕಿಯಿದೆ . ಜಿಎಸ್‌ಟಿ ಪದ್ಧತಿ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರಕಾರ ಜಿಎಸ್‌ಟಿಯಲ್ಲಿ ಇರುವ ಗೊಂದಲವನ್ನು ಪರಿಹರಿಸಬೇಕು ಅಥವಾ ಜಿಎಸ್‌ಟಿಯನ್ನು ರದ್ದುಗೊಳಿಸಿ ಹಿಂದಿನ ತೆರಿಗೆ ವ್ಯವಸ್ಥೆಗೆ ಮರಳಬೇಕು ಎಂದವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News