ದಿಲ್ಲಿ-ಎನ್‌ಸಿಆರ್ ಬೆಳೆ ತ್ಯಾಜ್ಯ ದಹನ ನಿಯಂತ್ರಿಸಲು ಕಾಯ್ದೆ : ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ

Update: 2020-10-26 15:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ. 26 : ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯ ಹಾಗೂ ಬೆಳೆ ತ್ಯಾಜ್ಯ ದಹನ ನಿಯಂತ್ರಿಸಲು ಕಾಯ್ದೆ ತರಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಎನ್‌ಸಿಆರ್ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ದಹನದ ಮೇಲೆ ನಿಗಾ ಇರಿಸಲು ಏಕ ಸದಸ್ಯ ಸಮಿತಿ ನಿಯೋಜಿಸುವ ತನ್ನ ಆದೇಶಕ್ಕೆ ತಡೆ ನೀಡಿದೆ. ಬೆಳೆ ತ್ಯಾಜ್ಯ ದಹನದ ವಿಷಯ ಸೇರಿದಂತೆ ವಾಯು ಮಾಲಿನ್ಯ ತಡೆಯಲು ಸಮಗ್ರ ಕಾಯ್ದೆ ತರುವ ಕೇಂದ್ರ ಸರಕಾರದ ನಿಲುವನ್ನು ಪರಿಗಣಿಸಿ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಆದೇಶ ಜಾರಿ ಮಾಡಿತು. ಅಕ್ಟೋಬರ್ 16ರಂದು ಸುಪ್ರೀಂ ಕೋರ್ಟ್ ಹರ್ಯಾಣ, ಪಂಜಾಬ್ ಹಾಗೂ ಉತ್ತರಪ್ರದೇಶದಲ್ಲಿ ಬೆಳೆ ತ್ಯಾಜ್ಯ ದಹನದ ಮೇಲೆ ನಿಗಾ ಇರಿಸಲು ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರ ಏಕ ಸದಸ್ಯ ಸಮಿತಿಯನ್ನು ರೂಪಿಸಿತ್ತು. ಈ ಸಮಿತಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ನೆರವು ಪಡೆಯಲಿದೆ ಎಂದು ಹೇಳಿತ್ತು. ಎನ್‌ಸಿಆರ್‌ನಲ್ಲಿ ಬೆಳೆ ತ್ಯಾಜ್ಯ ದಹನದ ಮೇಲೆ ನಿಗಾ ಇರಿಸಲು ಹಾಗೂ ನಿಯಂತ್ರಿಸಲು ಶೀಘ್ರದಲ್ಲಿ ಆಧ್ಯಾದೇಶ ಹೊರಡಿಸಲಾಗುವುದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ಕೇಂದ್ರ ಸರಕಾರ ಶೀಘ್ರ ಆದೇಶ ಜಾರಿಗೆ ಬಯಸಿದರೆ, ಕೂಡಲೇ ತರಲಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. ಕಾಯ್ದೆ ತರುವ ಕೇಂದ್ರ ಸರಕಾರದ ಪ್ರಸ್ತಾಪ ಸ್ವಾಗತಾರ್ಹ ನಡೆ ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹೇಳಿದರು. ‘‘ಇದು ಸ್ವಾಗತಾರ್ಹ ನಡೆ. ಇದು ಸರಕಾರ ಕಾರ್ಯ ನಿರ್ವಹಿಸಬೇಕಾದ ರೀತಿ. ಇದು ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಷಯ ಅಲ್ಲ. ಮಾಲಿನ್ಯದಿಂದ ಜನರು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಇಲ್ಲಿನ ವಿಷಯ. ಇದನ್ನು ನಿಯಂತ್ರಿಸಬೇಕು’’ ಎಂದು ಬೋಬ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News