ನೀರವ್ ಮೋದಿ ಜಾಮೀನು ಅರ್ಜಿಯನ್ನು 7ನೇ ಬಾರಿ ತಿರಸ್ಕರಿಸಿದ ಲಂಡನ್ ನ್ಯಾಯಾಲಯ

Update: 2020-10-26 15:35 GMT

ಹೊಸದಿಲ್ಲಿ: ಪಲಾಯನಗೈದಿರುವ ಭಾರತದ ಉದ್ಯಮಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಂಡನ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಬ್ರಿಟನ್ ನ ನ್ಯಾಯಾಲಯಗಳು ಏಳನೇ  ಬಾರಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್ ಚೋಕ್ರಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 13,000 ಕೋ.ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತಕ್ಕೆ ಬೇಕಾಗಿದ್ದು, ನೀರವ್ ಮೋದಿಯನ್ನು ಕಳೆದ ವರ್ಷ ಮಾರ್ಚ್ 19 ರಂದು ಸಿಬಿಐ ಹಸ್ತಾಂತರದ ಕೋರಿಕೆಯ ಮೇರೆಗೆ ಲಂಡನ್ ನಲ್ಲಿ ಬಂಧಿಸಲಾಗಿತ್ತು.

ಸಿಬಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಯುನೈಟೆಡ್ ಕಿಂಗ್ ಡಮ್ ನ ಕ್ರೌನ್ ಪ್ರಾಸಿಕ್ಯೂಶನ್ ಸೇವೆಯಲ್ಲಿನ  ಅತ್ಯುತ್ತಮ ಸಮನ್ವಯದ ಪರಿಣಾಮವಾಗಿ ಜಾಮೀನು ಅರ್ಜಿ ಪದೇ ಪದೇ ತಿರಸ್ಕೃತವಾಗುತ್ತಿದೆ ಎಂದು ಸಿಬಿಐ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀರವ್ ಮೋದಿ ಈ ಹಿಂದೆ ನಾಲ್ಕು ಬಾರಿ ಮಾರ್ಚ್ 20, 29 , ಮೇ 8 ಹಾಗೂ ನವೆಂಬರ್ 6 ರಂದು ಲಂಡನ್ ನ ವೆಸ್ಟ್ ಮಿನ್ ಸ್ಟರ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು  ಜೂ. 12,2019 ಹಾಗೂ ಮಾ.5,2020ರಲ್ಲಿ ಮೋದಿ ಲಂಡನ್ ಹೈಕೋರ್ಟ್ ಗೆ ಜಾಮೀನು ಪಡೆಯುವ ಪ್ರಯತ್ನವೂ ವಿಫಲವಾಗಿತ್ತು. ಏಳನೇ ಬಾರಿ ಜಾಮೀನು ಪ್ರಯತ್ನವನ್ನು ವೆಸ್ಟ್ ಮಿನ್ಸ್ಟರ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News