ಸಂಧಿವಾತದ ಔಷಧಿಯ ಅಡ್ಡಪರಿಣಾಮ ತಗ್ಗಿಸುವ ವಿಧಾನ : ಭಾರತೀಯ ವಿಜ್ಞಾನಿಗಳ ಸಾಧನೆ

Update: 2020-10-26 15:38 GMT

ಹೊಸದಿಲ್ಲಿ, ಅ.26: ಸಂಧಿವಾತ ರೋಗದ ಔಷಧ ಸಲ್ಫಪಿರಿಡೀನ್‌ನ ಅಡ್ಡ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ನವೀನ ವಿಧಾನವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ.

ಸಂಧಿವಾತ ರೋಗದಿಂದ ಬಳಲುತ್ತಿರುವವರು ಉಪಯೋಗಿಸುವ ಸಲ್ಫಪಿರಿಡೀನ್ ಔಷಧದ ನಿರಂತರ ಸೇವನೆಯಿಂದ ವಾಂತಿ, ವಾಕರಿಕೆ, ತಲೆ ಸುತ್ತಿದಂತಾಗುವುದು, ಆತಂಕದ ಭಾವನೆ, ಕಿಬ್ಬೊಟ್ಟೆ ನೋವು ಮುಂತಾದ ಅಡ್ಡ ಪರಿಣಾಮ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ, ಭಾರತೀಯ ವಿಜ್ಞಾನಿಗಳು ನವೀನ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ವಿಧಾನದ ಮೂಲಕ ಸಲ್ಫಪಿರಿಡೀನ್ ಔಷಧವನ್ನು ನೇರವಾಗಿ ನೋವಿರುವ ಸ್ಥಳಕ್ಕೇ ನೀಡಲಾಗುತ್ತದೆ . ಸಂಧಿವಾತದ ರೋಗ ಅಂಟಿದ ಸ್ಥಳಕ್ಕೆ ನೇರವಾಗಿ ಇಂಜಕ್ಷನ್ ಮೂಲಕ ಔಷಧವನ್ನು ತಲುಪಿಸುವ ವಿಧಾನ ಇದಾಗಿದೆ. ಇದರಿಂದ ಮದ್ದಿನ ಪ್ರಭಾವ ಆ ಸ್ಥಳಕ್ಕಷ್ಟೇ ಸೀಮಿತವಾಗಿರುತ್ತದೆ . ಇದುವರೆಗೆ ಔಷಧವನ್ನು ದ್ರವ ರೂಪದಲ್ಲಿ ಬಾಯಿಯ ಮೂಲಕ ಸೇವಿಸಬೇಕಿತ್ತು. ಇದು ಅತ್ಯಂತ ಸುರಕ್ಷಿತ ವಿಧಾನವಾಗಿದೆ ಎಂದು ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ(ಎಲ್‌ಪಿಯು)ಯ ಅಸೋಸಿಯೇಟ್ ಪ್ರೊಫೆಸರ್ ಭೂಪಿಂದರ್ ಕಪೂರ್ ಹೇಳಿದ್ದಾರೆ. ಎಲ್‌ಪಿಯುನ ಸಂಶೋಧಕ ವಿಜ್ಞಾನಿಗಳು ಈ ನವೀನ ವಿಧಾನವನ್ನು ಅಭಿವೃದ್ಧಿಗೊಳಿಸಿದ್ದಾರೆ. ಸಂಶೋಧಕರು ಸಲ್ಫಪಿರಿಡೀನ್‌ಗೆ ಪೂರ್ವಸೂಚಕ (ಜೈವಿಕವಾಗಿ ನಿಷ್ಕ್ರಿಯವಾಗಿರುವ ಸಂಯೋಜನೆ)ವನ್ನು ಅಭಿವೃದ್ಧಿಗೊಳಿಸಿದ್ದು ಬಳಿಕ ಅದನ್ನು ನವೀನ ವಿಧಾನದಲ್ಲಿ ವಿನ್ಯಾಸಗೊಳಿಸಲಾಗಿದೆ . ಇದು ಲಿಪೋಸೋಮ್‌ಗಳಲ್ಲಿ ಉತ್ತಮ ಧಾರಣ ಶಕ್ತಿಯನ್ನು ಪ್ರದರ್ಶಿಸುತ್ತದೆ ಮತ್ತು ಉರಿಯೂತದ ಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ ಎಂದು ‘ಮೆಟೀರಿಯಲ್ಸ್ ಸೈಯನ್ಸ್ ಆ್ಯಂಡ್ ಇಂಜಿನಿಯರಿಂಗ್ ಸಿ’ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಲಿಪೋಸೋಮ್ ಎಂಬುದು ಔಷಧಗಳ ಸಂಚಲನಕ್ಕೆ ಬಳಸಲಾಗುವ ಗೋಳಾಕಾರದ ಕೋಶಕವಾಗಿದೆ).

ಭೂಪಿಂದರ್ ಕಪೂರ್, ಮೋನಿಕಾ ಗುಲಾಟಿ ಮತ್ತು ಸಚಿನ್ ಕೆ. ಸಿಂಗ್ ಸಂಶೋಧನಾ ತಂಡದಲ್ಲಿದ್ದರು. ಇದೊಂದು ಭರವಸೆಯ ಸಂಶೋಧನೆಯಾಗಿದೆ ಎಂದು ಸಿಲಿಗುರಿಯ ನಾರ್ತ್‌ ಬೆಂಗಾಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ ಅರೂಪ್ ಕುಮಾರ್ ಬ್ಯಾನರ್ಜಿ ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News