ಶ್ರೀಕೃಷ್ಣ ಮಠದಲ್ಲಿ ಅಬೂಬಕ್ಕರ್ ಸಂರಕ್ಷಿಸಿದ ಭತ್ತದ ತಳಿಗಳ ಪ್ರದರ್ಶನ !

Update: 2020-10-26 16:08 GMT

ಉಡುಪಿ, ಅ.26: ವಿಜಯ ದಶಮಿಯಂದು ಕದಿರು ಕಟ್ಟುವ ಕಾರ್ಯ ಕ್ರಮದ ಪ್ರಯುಕ್ತ ದೇಶೀಯ ಭತ್ತದ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಕಳದ ಕೃಷಿಕ ಅಬೂಬಕ್ಕರ್, ಯಾವುದೇ ಗೊಬ್ಬರಗಳನ್ನು ಬಳಸದೆ ಬೆಳೆಸಿರುವ 70ಕ್ಕೂ ಅಧಿಕ ಭತ್ತದ ತಳಿಗಳನ್ನು ಇಂದು ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆಯ ಮಹಡಿಯಲ್ಲಿ ಪ್ರದರ್ಶಿಸಲಾಯಿತು.

ಕಾರ್ಕಳದ ಸಾಗರ್ ಹೋಟೆಲ್‌ನ ಮ್ಯಾನೇಜರ್ ಆಗಿರುವ ಅಬೂಬಕ್ಕರ್ ಅವರು, ಪ್ರವೀಣ್ ಕೋಟ್ಯಾನ್, ವಿನೀತ್ ಕುಮಾರ್ ಸಹಕಾರ ದೊಂದಿಗೆ ಬೆಳೆಸಿ ಸಂರಕ್ಷಿಸಿದ ಈ ಭತ್ತದ ತಳಿಗಳನ್ನು ಪರ್ಯಾಯ ಅದಮಾರು ಮಠಾ ಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶಯದಂತೆ ಶ್ರೀಕೃಷ್ಣ ಮಠದ ಭಕ್ತಾದಿಗಳು ನಡೆದು ಹೋಗುವ ಹಾದಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವು ಗಳನ್ನು ನೂರಾರು ಸಂಖ್ಯೆಯ ಭಕ್ತಾಧಿಗಳು ವೀಕ್ಷಿಸಿದರು.

ನೆಲ್ಲೂರು ಪುಟ್ಟಲ್, ಜಿರಿಗೆ ಸಣ್ಣ, ಮಂಜುಗುನಿ, ಚಕಾವ್ ಪೊರಿಯಟ್, ಗೋಪಿಕ, ಶಂಕ್ರು ಕೆಂಪಕ್ಕಿ, ಕಡಲಚಂಪ, ಚಂಪಕ, ಎ.ಪಿ.46, ಆಂದ್ರ ಬಾಸ್ಮತಿ, ದಪ್ಪ ಪಲ್ಯ, ರತ್ನ ಸಾಗರ್, ರಾಜ್‌ಬೋಗ, ಡಾಂಬರ್ ಸಲೈ, ಮುಕ್ಮಣ್ಣಿ ಸಣ್ಣ, ನಾಗ ಸಂಪಿಗೆ, ಸಣ್ಣ ರಾಜಾಗ್ಯಾಮೆ ಸಹಿತ ನಾನಾ ಬಗೆಯ ಭತ್ತದ ತಳಿಗಳು ಗಮನ ಸೆಳೆದವು.

ಅಬೂಬಕ್ಕರ್ ಕಳೆದ 5 ವರ್ಷಗಳಿಂದ ಕಾರ್ಕಳದ ಸುತ್ತಲಿನ ಪರಿಸರದಲ್ಲಿ ಹಡಿಲು ಬಿದ್ದಿರುವ ಗದ್ದೆಗಳನ್ನು ಪಡೆದು ಭತ್ತದ ತಳಿಯನ್ನು ಸಂರಕ್ಷಿ ಸುವ ಕೆಲಸ ಮಾಡುತ್ತಿದ್ದಾರೆ. ಇವರು ಇದಕ್ಕೆ ರಸಗೊಬ್ಬರ ಸೇರಿದಂತೆ ಯಾವುದೇ ಗೊಬ್ಬರ ವನ್ನು ಬಳಸುವುದಿಲ್ಲ. ಭತ್ತದ ಕೃಷಿ ಕಟಾವು ಮಾಡಿದ ಬಳಿಕ ಗದ್ದೆಯಲ್ಲಿ ಉಳಿಯುವ ಹುಲ್ಲೇ ಇದಕ್ಕೆ ಗೊಬ್ಬರ ಆಗಿದೆ. ಆರಂಭದ 2 ವರ್ಷ ಇವರಿಗೆ ಇದ ರಿಂದ ನಷ್ಟ ಉಂಟಾಗಿದ್ದರೂ ಸದ್ಯ ಯಾವುದೇ ನಷ್ಟ ಇಲ್ಲದೆ ಮುನ್ನಡೆಸುತ್ತಿದ್ದಾರೆ.

‘ಮೊದಲ ವರ್ಷ ಒಂದೂವರೆ ಎಕರೆ ಜಾಗದಲ್ಲಿ ಭತ್ತದ ತಳಿ ಸಂರಕ್ಷಿಸಿ, ಎರಡನೆ ಮತ್ತು ಮೂರನೆ ವರ್ಷದಲ್ಲಿ 3 ಎಕರೆ, ನಾಲ್ಕನೇ ವರ್ಷದಲ್ಲಿ 8 ಎಕರೆ ಹಾಗೂ ಈಗ 12 ಎಕರೆಯಲ್ಲಿ ಭತ್ತದ ತಳಿಯನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ವರ್ಷಕ್ಕೆ 300 ರಿಂದ 400 ತಳಿ ಗಳನ್ನು ಸಂರಕ್ಷಿಸುವ ಗುರಿ ಹೊಂದಲಾಗಿದೆ ಎಂದು ಅಬೂಬಕ್ಕರ್ ಮಾಹಿತಿ ನೀಡಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಧ್ವಜಯಂತಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ 180ಕ್ಕೂ ಅಧಿಕ ಭತ್ತದ ತಳಿಗಳನ್ನು ಸುಮಾರು 50 ವರ್ಷಗಳಿಂದ ಬೆಳೆದು ಸಂರಕ್ಷಿಸುತ್ತಿರುವ ಬೆಳ್ತಂಗಡಿ ಬಂಗಾಡಿಯ ಬಿ.ಕೆ.ದೇವರಾವ್ ದಂಪತಿಯನ್ನು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.

‘ಈ ಹಿಂದೆ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಭತ್ತದ ತಳಿಗಳಿದ್ದು, ಸದ್ಯ 20 ಸಾವಿರ ಮಾತ್ರವೇ ತಳಿಗಳು ಉಳಿದುಕೊಂಡಿವೆ. ನಮ್ಮಲ್ಲಿ 180 ತಳಿ ಗಳನ್ನು ಸಂರಕ್ಷಿಸಲಾಗುತ್ತಿದೆ. ಅಲ್ಲದೇ 80 ತಳಿಯ ಮಾವು, 50 ತಳಿಯ ಹಲಸು ಇದೆ. ಆದರೆ ನಮ್ಮದು ಬೀಜ ಮಾರಾಟ ಕಂಪನಿಯಲ್ಲ ಎಂದು ದೇವರಾವ್ ಅವರ ಪುತ್ರ ಪರಮೇಶ್ವರ ರಾವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News