ಕೊರೋನ ಲಸಿಕೆ ಅಲ್ಲ, ಆದರೂ ಕೊರೋನಿಲ್ ಮಾರಾಟಕ್ಕೆ ಅಡ್ಡಿಯಿಲ್ಲ !

Update: 2020-10-27 08:22 GMT

ಹೊಸದಿಲ್ಲಿ: ಬಾಬಾ ರಾಮದೇವ್ ಅವರ ಪತಂಜಲಿ ತಯಾರಿಸಿರುವ ಕೊರೋನಿಲ್ ಕಿಟ್ ಕೋವಿಡ್‍ಗೆ ಔಷಧಿಯಲ್ಲದೇ ಇದ್ದರೂ ಅದರ ಮಾರಾಟಕ್ಕೆ ಈ ಅಂಶ ಅಡ್ಡಿಯಾಗಿಲ್ಲ. ನಾಲ್ಕು ತಿಂಗಳ ಹಿಂದೆ ಮಾರುಕಟ್ಟೆಗೆ ಬಿಡುಗಡೆಗೊಂಡ ಈ ಕೊರೋನಿಲ್ ಕಿಟ್ ಇಲ್ಲಿಯ ತನಕ 85 ಲಕ್ಷ ಕಿಟ್ ಗಳು ಮಾರಾಟವಾಗಿದೆ ಹಾಗೂ ಒಟ್ಟು ಮಾರಾಟ ಮೌಲ್ಯ ಬರೋಬ್ಬರಿ ರೂ. 241 ಕೋಟಿಯಾಗಿದೆ.

ಕೋವಿಡ್ ಔಷಧಿ ಎಂದು ಹೇಳಿಕೊಂಡು ಕೊರೋನಿಲ್ ಜೂನ್ 23ರಂದು ಬಿಡುಗಡೆಗೊಂಡಿದ್ದರೂ ಕೋವಿಡ್ ಗೆ ಪರಿಣಾಮಕಾರಿ ಎಂಬುದಕ್ಕೆ ಸೂಕ್ತ ಕ್ಲಿನಿಕಲ್ ಟ್ರಯಲ್ ಮಾಹಿತಿಯಿಲ್ಲದೇ ಇರುವುದರಿಂದ ಸಂಬಂಧಿತ ಪ್ರಾಧಿಕಾರಗಳಿಂದ ಪತಂಜಲಿ ತರಾಟೆಗೊಳಗಾದ ನಂತರ ಕೊರೋನಿಲ್ ಅನ್ನು ಕೆಮ್ಮು, ಜ್ವರ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯಾಗಿ ಮಾರಾಟ ಮಾಡಲು ಸಂಸ್ಥೆ ಅನುಮತಿ ಕೋರಿತ್ತು.

ಸದ್ಯ ಅದನ್ನು ಕೋವಿಡ್-19 ಇಮ್ಮ್ಯುನಿಟಿ ಬೂಸ್ಟರ್ ಕಿಟ್ ಆಗಿ ಮಾರಾಟ ಮಾಡಲಾಗುತ್ತಿದ್ದು, ಒಂದು ಕಿಟ್‍ನಲ್ಲಿ ಎರಡು ಪ್ಯಾಕ್ ಕೊರೊನಿಲ್ ಹಾಗೂ  ಸ್ವಸರಿ ವಾಟಿ ಗುಳಿಗೆಗಳು ಹಾಗೂ ಅನು ತೈಲ ಎಂಬ ಎಣ್ಣೆ ಇದೆ. ಇಡೀ ಕಿಟ್ ಬೆಲೆ ರೂ. 545 ಆಗಿದ್ದು ಕಿಟ್ ನಲ್ಲಿನ ಔಷಧಿಗಳನ್ನು ಕಂಪೆನಿ ಪ್ರತ್ಯೇಕವಾಗಿಯೂ ಮಾರಾಟ ಮಾಡುತ್ತಿದೆ.

ಜೂನ್ 23 ಹಾಗೂ ಅಕ್ಟೋಬರ್ 18ರ ನಡುವೆ ಒಟ್ಟು 23.54 ಲಕ್ಷ ಕೊರೋನಿಲ್ ಕಿಟ್ ಮಾರಾಟವಾಗಿದೆ. ಇದರ ಹೊರತಾಗಿ. 18.50 ಲಕ್ಷ ಅನು ತೈಲ ಬಾಟಲಿ, ರೂ 20.13 ಲಕ್ಷ ಕೊರೋನಿಲ್ ಗುಳಿಗೆಗಳ ಬಾಟಲಿ ಹಾಗೂ 23.32 ಲಕ್ಷ ಸ್ವಸರಿ ವಾಟಿ ಗುಳಿಗೆಯ ಬಾಟಲಿಗಳನ್ನು ಸಂಸ್ಥೆ ಮಾರಾಟ ಮಾಡಿದ್ದು ಇವುಗಳ ತಲಾ ಬೆಲೆ ಕ್ರಮವಾಗಿ ರೂ 25 ರೂ 400 ಹಾಗೂ ರೂ 120 ಆಗಿದೆ. ಹೀಗೆ ಎಲ್ಲಾ ಉತ್ಪನ್ನಗಳ ಒಟ್ಟು ಮಾರಾಟ ಮೌಲ್ಯ ರೂ. 241.41 ಕೋಟಿ ಆಗಿದೆ.

ಮಾರಾಟ ಅಂಕಿಅಂಶಗಳನ್ನು ನೋಡಿದಾಗ ನಮ್ಮ ಉತ್ಪನ್ನ ಯಶಸ್ವಿಯಾಗಿದೆ  ಎಂದು ಪತಂಜಲಿ ಆಯುರ್ವೇದ ಸಿಇಒ ಆಚಾರ್ಯ ಬಾಲಕೃಷ್ಣ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News