×
Ad

ನದಿದಂಡೆಯಲ್ಲೇ ಕಟ್ಟಡ ಅವಶೇಷಗಳ ವಿಲೇವಾರಿ

Update: 2020-10-27 16:44 IST
ಫಲ್ಗುಣಿ ನದಿ ದಂಡೆಯಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದ ಲಾರಿಯನ್ನು ಮನಪಾ ಅಧಿಕಾರಿಗಳು ವಶಕ್ಕೆ ಪಡೆದಿರುವುದು.

► ಕಟ್ಟಡ ತ್ಯಾಜ್ಯ ಸುರಿಯುವಿಕೆಗೆ ಜಾಗದ ಕೊರತೆ

ಮಂಗಳೂರು, ಅ.27: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಟ್ಟಡ ನಿರ್ಮಾಣ ಸ್ಥಳದ ಭೂ ಅಗೆತದಿಂದ ತೆಗೆದ ಮಣ್ಣು ಮತ್ತು ಹಳೆ ಕಟ್ಟಡ ಕೆಡವುದರಿಂದ ಉಂಟಾದ ಅವಶೇಷಗಳನ್ನು ನದಿಯ ದಂಡೆಗಳಲ್ಲಿ ವಿಲೇವಾರಿ ಮಾಡುವ ಮೂಲಕ ಪರಿಸರಕ್ಕೆ ಪ್ರಹಾರ ನೀಡಲಾಗುತ್ತಿದೆ.

ನಗರ ವ್ಯಾಪ್ತಿಯ ಕೆಲವು ಕಟ್ಟಡ ನಿರ್ಮಾಣದಾರರು ಕಟ್ಟಡ ತ್ಯಾಜ್ಯ ವಿಲೇವಾರಿಯನ್ನು ಕಾನೂನುಬಾಹಿರವಾಗಿ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಕಳೆದ ಮೂರು- ನಾಲ್ಕು ತಿಂಗಳಿಂದ ವಿಪರೀತ ಎನ್ನುವಷ್ಟು ‘ಉಲ್ಲಂಘನೆ’ ಪ್ರಕರಣಗಳಲ್ಲಿ ಏರಿಕೆಯಾಗಿದೆ.

ಅವಶೇಷವನ್ನು ನದಿದಂಡೆಯಲ್ಲಿ ವಿಲೇವಾರಿ ಮಾಡುತ್ತಿ ರುವುದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ನದಿ ದಂಡೆಯಲ್ಲೇ ತ್ಯಾಜ್ಯ ಸುರಿಯುವುದರಿಂದ ನದಿಮೂಲಕ್ಕೆ ಭಾರೀ ಪೆಟ್ಟು ನೀಡುವುದಲ್ಲದೆ, ಜಲಚರಗಳ ಜೀವಕ್ಕೂ ಕುತ್ತು ತಂದಿದೆ. ಇಲ್ಲಿ ಪರಿಸರದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ.

ಏತನ್ಮಧ್ಯೆ, ರಸ್ತೆಯ ಬದಿಯಲ್ಲಿ ಕಟ್ಟಡ ಅವಶೇಷ ಸುರಿಯುವುದು ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲಿ ಸುರಿದ ತ್ಯಾಜ್ಯವು ರಸ್ತೆಗೂ ವಿಸ್ತರಿಸುತ್ತಿದೆ. ಇದರಿಂದ ವಾಹನಗಳು ಜಾರಿ ಬೀಳುವ ಮೂಲಕ ಅಪಘಾತಕ್ಕೆ ಕಾರಣವಾಗಿದೆ. ಇಂತಹ ಚಟುವಟಿಕೆಗಳು ಮುನ್ಸಿಪಲ್ ಕಾಯ್ದೆಯನ್ವಯ ಕಾನೂನುಬಾಹಿರವಾಗಿದೆ.

ತ್ಯಾಜ್ಯ ವಿಲೇಗೆ ಭೂಮಿ ಕೊರತೆ: ನಗರ ವ್ಯಾಪ್ತಿಯಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಭೂಮಿಯ ಕೊರತೆ ಎದುರಾಗಿದೆ. ಇದರಿಂದಲೇ ನದಿ ದಂಡೆ, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಅವಶೇಷ ಸುರಿಯಲು ಕಾರಣವಾಗಿದೆ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿಬರುವ ಆರೋಪ. ಸೂಕ್ತ ಭೂಮಿ ಗುರುತಿಸುವ ಕಾರ್ಯ ನಡೆದಿದೆ. ಶೀಘ್ರದಲ್ಲೇ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವುದು ಮಹಾನಗರ ಪಾಲಿಕೆಯ ಪ್ರತ್ಯುತ್ತರ.

ಅಧಿಕಾರಿಗಳ ನಿರ್ಲಕ್ಷ: ‘ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್‌ಇಸಿಎಫ್)ಕೋರ್ಟ್ ಅದಾಲತ್‌ನಲ್ಲಿ ಪರಿಸರಕ್ಕೆ ವಿವಿಧ ಆಯಾಮಗಳಲ್ಲಿ ಪೆಟ್ಟು ನೀಡುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿತ್ತು. ನದಿದಂಡೆಯಲ್ಲಿ ತ್ಯಾಜ್ಯ ಸುರಿಯುವುದರಿಂದ ಉದ್ಭವಿಸುವ ಸಮಸ್ಯೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ನೀಡಲಾಗಿತ್ತು. ಆದಾಗ್ಯೂ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಎನ್‌ಇಸಿಎಫ್‌ನ ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಉಲ್ಲಂಘನೆ!: ಕಟ್ಟಡ ತ್ಯಾಜ್ಯ, ಅವಶೇಷ, ಮಣ್ಣು ಸಾಗಾಟವನ್ನು ಕಡ್ಡಾಯವಾಗಿ ಮುಚ್ಚಿದ ಲಾರಿಗಳ ಮೂಲಕ ರಾತ್ರಿ ವೇಳೆಯಲ್ಲಿ ಸಾಗಾಟ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇತ್ತೀಚೆಗೆ ಕಟ್ಟುನಿಟ್ಟಿನ ನಿರ್ದೇಶನ ಹೊರಡಿಸಿದ್ದರು.

ಕಾಯ್ದೆ ಉಲ್ಲಂಘಿಸುವವರಿಂದ ಕಟ್ಟಡ ಮತ್ತು ಭಗ್ನಾವಶೇಷ ನಿರ್ವಹಣಾ ನಿಯಮ-2016ರಂತೆ ರಸ್ತೆ ಸ್ವಚ್ಛತೆಯ ವೆಚ್ಚ ವಸೂಲು, ಸ್ಥಳದಲ್ಲೇ ಕಟ್ಟಡ ನಿರ್ಮಾಣದ ಪರವಾನಿಗೆ ರದ್ದುಪಡಿಸುವ ಕ್ರಮದ ಬಗ್ಗೆಯೂ ಆಯುಕ್ತರು ಉಲ್ಲೇಖಿಸಿದ್ದರು. ಆದಾಗ್ಯೂ, ಹಲವು ಕಟ್ಟಡ ನಿರ್ಮಾಣದಾರರು ಕಾನೂನು ಉಲ್ಲಂಘಿಸಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಪ್ರಕರಣಗಳು ‘ಪರಿಸರ ದುರಂತ’ಕ್ಕೆ ಸಾಕ್ಷಿಯಾಗಿದೆ.

ಕಟ್ಟಡ ಅವಶೇಷ ಸುರಿಯಲು ಪಾಲಿಕೆ ವ್ಯಾಪ್ತಿಯಲ್ಲೇ ಭೂಮಿ ಗುರುತಿಸಲಾಗಿದೆ. ಕುಂಜತ್‌ಬೈಲ್, ಜೆಪ್ಪಿನಮೊಗರು ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಭೂಮಿ ನೀಡುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಅಗತ್ಯ. ಮುಂದಿನ ವಾರ ಈ ಬಗ್ಗೆ ತೀರ್ಮಾನ ಹೊರಬೀಳಲಿದೆ. ಅನಧಿಕೃತವಾಗಿ ತ್ಯಾಜ್ಯ ವಿಲೇ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

| ದಿವಾಕರ ಪಾಂಡೇಶ್ವರ, ಮೇಯರ್, ಮಂಗಳೂರು ಮಹಾನಗರ ಪಾಲಿಕೆ

ಅನಧಿಕೃತವಾಗಿ ನದಿ ದಂಡೆಯಲ್ಲಿ ಕಟ್ಟಡದ ಅವಶೇಷ ಸುರಿಯುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಇದರಿಂದ ನದಿಮೂಲಕ್ಕೂ ಭಾರೀ ಹೊಡೆತ ಬೀಳಲಿದೆ. ಪಚ್ಚನಾಡಿ ಸಮೀಪವೇ ತ್ಯಾಜ್ಯ ಸುರಿಯಲು ಪಾಲಿಕೆ ಅವಕಾಶ ನೀಡುವ ಸಾಧ್ಯತೆ ಇದ್ದು, ಮತ್ತೊಂದು ಅನಾಹುತಕ್ಕೆ ಎಡೆಮಾಡಿ ಕೊಡುವಂತಿದೆ.

| ಶಶಿಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ಎನ್‌ಇಸಿಎಫ್

ಕಳೆದ ಹಲವು ತಿಂಗಳಿಂದ ಕಟ್ಟಡ ಅವಶೇಷ ವಿಲೇವಾರಿಗೆ ಸಮಸ್ಯೆ ಉದ್ಭವಿಸಿದೆ. ಅಸೋಸಿಯೇಶನ್‌ನಿಂದ ಪಾಲಿಕೆಗೆ ಗಮನ ಸೆಳೆಯಲಾಗಿದೆ. ಪಾಲಿಕೆಯಿಂದ ಭೂಮಿ ನೀಡುವ ಬಗ್ಗೆ ಭರವಸೆ ಇದೆ.

| ಪುರುಷೋತ್ತಮ ಕೊಟ್ಟಾರಿ, ಅಧ್ಯಕ್ಷ, ಸಿವಿಲ್ ಕಾಂಟ್ರಾಕ್ಟರ್ಸ್‌ ಅಸೋಸಿಯೇಶನ್

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News