ಪಾಕ್ ಮೂಲದ 18 ಉಗ್ರರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಸರಕಾರ

Update: 2020-10-27 13:15 GMT

ಹೊಸದಿಲ್ಲಿ, ಅ.27: ಕೇಂದ್ರ ಸರಕಾರವು ಕಾನೂನು ಬಾಹಿರ ಚಟುವಟಿಕೆ ತಡೆ ತಿದ್ದುಪಡಿ ಕಾಯ್ದೆ(ಯುಎಪಿಎ)ಯಡಿ ಪಾಕಿಸ್ತಾನಿ ಮೂಲದ 18 ಉಗ್ರರನ್ನು ವೈಯಕ್ತಿಕ ಭಯೋತ್ಪಾದಕರೆಂದು ಘೋಷಿಸಿದೆ.

ಹಿಜ್ಬುಲ್ ಮುಜಾ ಹಿದೀನ್‌ನ ಮುಖ್ಯಸ್ಥ ಸಯೀದ್ ಸಲಾಹುದ್ದೀನ್, ಐಎಸ್‌ಐ ಮುಖಂಡ ಸಾಜಿದ್ ಮಿರ್, ಲಷ್ಕರೆ ತಯ್ಯಬ ಸಂಘಟನೆಯ ಮುಖ್ಯಸ್ಥ ಹಫೀಝ್‌ನ ಮೈದುನ ಅಬ್ದುಲ್ ರವೂಫ್, ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸ್ಥಾಪಕರಾದ ರಿಯಾಝ್ ಭಟ್ಕಳ ಮತ್ತವನ ಸಹೋದರ ಇಕ್ಬಾಲ್ ಭಟ್ಕಳ, ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟ ಶಕೀಲ್, ಟೈಗರ್ ಮೆಮನ್, ಜಾವೇದ್ ಚಿಕ್ನ, ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ಯೂಸುಫ್ ಮುಝಾಮಿಲ್, ಲಷ್ಕರೆ ತೈಯಬದ ಹಣಕಾಸು ವಿಭಾಗದ ಉಪಾಧ್ಯಕ್ಷ ಶಾಹಿದ್ ಮೆಹ್ಮೂದ್, ಪಾಕ್ ಮೂಲದ ಉಗ್ರ ಫರ್ಹತುಲ್ಲ ಘೋರಿ, ಸಂಸತ್ತಿನ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದ ಪ್ರಮಖ ಆರೋಪಿ ಇಬ್ರಾಹಿಂ ಅಥರ್, ಯೂಸುಫ್ ಅಝರ್, ಶಾಹಿದ್ ಲತೀಫ್, ಗುಲಾಂ ನಬಿ ಖಾನ್, ಜಾಫರ್ ಹುಸೈನ್ ಭಟ್, ಮುಹಮ್ಮದ್ ಅನೀಸ್ ಶೇಖ್‌ರನ್ನು ವೈಯಕ್ತಿಕ ಉಗ್ರರೆಂದು ಸರಕಾರ ಘೋಷಿಸಿದೆ.

2019ರ ಸೆಪ್ಟಂಬರ್‌ನಲ್ಲಿ ಮಸೂದ್ ಅಝರ್, ಹಫೀಝ್ ಸಯೀದ್, ದಾವೂದ್ ಇಬ್ರಾಹಿಂ ಮತ್ತು ರೆಹ್ಮಾನ್ ಲಖ್ವಿಯನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದ್ದರೆ, 2020ರ ಜುಲೈಯಲ್ಲಿ 9 ಖಾಲಿಸ್ತಾನಿ ಉಗ್ರರನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದೆ. ಈ ಮೊದಲು ಯುಎಪಿಎ ಕಾಯ್ದೆಯಡಿ ಉಗ್ರರ ಗುಂಪುಗಳನ್ನು ಮಾತ್ರ ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಲು ಅವಕಾಶವಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ)ಗೆ 2019ರ ಆಗಸ್ಟ್‌ನಲ್ಲಿ ತಿದ್ದುಪಡಿ ತಂದು, ವ್ಯಕ್ತಿಗಳನ್ನೂ ಭಯೋತ್ಪಾದಕರೆಂದು ಘೋಷಿಸಲು ಅವಕಾಶ ಮಾಡಿತು. ಭಯೋತ್ಪಾದಕರೆಂದು ಘೋಷಿಸಲಾದ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಈ ಕಾಯ್ದೆಯಡಿ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News