ಉಡುಪಿ : 85 ಮಂದಿಗೆ ಹೊಸದಾಗಿ ಕೊರೋನ ಪಾಸಿಟಿವ್

Update: 2020-10-27 13:39 GMT

ಉಡುಪಿ, ಅ.26: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕಂಡುಬಂದಿರುವ ಕೋವಿಡ್ ಸೋಂಕಿನ ಪ್ರಮಾಣದ ಇಳಿಕೆ ಇಂದು ಸಹ ಮುಂದುವರಿದಿದ್ದು, ಮಂಗಳವಾರ ಹೊಸದಾಗಿ ಕೇವಲ 85 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ 204 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸದ್ಯ ಕೋವಿಡ್‌ಗೆ ಸಕ್ರಿಯರಾಗಿರುವವರ ಸಂಖ್ಯೆ ಆಗಸ್ಟ್ ಬಳಿಕ ಇದೇ ಮೊದಲ ಬಾರಿ ನಾಲ್ಕಂಕಿಯಿಂದ ಕೆಳಗಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 85 ಮಂದಿಯಲ್ಲಿ ಮಕ್ಕಳು ಸೇರಿದಂತೆ 45 ಮಂದಿ ಪುರುಷರು ಹಾಗೂ 40 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 24 ಪುರುಷರು ಹಾಗೂ 24 ಮಹಿಳೆಯರಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 43, ಕುಂದಾಪುರ ತಾಲೂಕಿನ 23 ಹಾಗೂ ಕಾರ್ಕಳ ತಾಲೂಕಿನ 15 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಚಿಕಿತ್ಸೆಗೆಂದು ಹೊರಜಿಲ್ಲೆಗಳಿಂದ ಬಂದ ನಾಲ್ವರು ಸಹ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ.ಸೂಡ ಹೇಳಿದರು.

ದಿನದಲ್ಲಿ ಪಾಸಿಟಿವ್ ಬಂದ 85 ಮಂದಿಯಲ್ಲಿ ನಾಲ್ವರನ್ನು ಮಾತ್ರ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿದರೆ, ಉಳಿದ 81 ಮಂದಿ ತಮ್ಮ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

204 ಮಂದಿ ಗುಣಮುಖ: ಸೋಮವಾರ ಒಟ್ಟು 204 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿ ದ್ದಾರೆ. ಹೀಗೆ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಈಗ 20,505 ಆಗಿದೆ. ಜಿಲ್ಲೆಯಲ್ಲಿ ಸದ್ಯ 981 ಮಂದಿ ಮಾತ್ರ ಸಕ್ರೀಯ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಮನೆಗಳ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದವರು ವಿವರಿಸಿದರು.

3291 ನೆಗೆಟಿವ್:  ಜಿಲ್ಲೆಯಲ್ಲಿ ಸೋಮವಾರ ಒಟ್ಟು 3361 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 3291 ಮಂದಿ ನೆಗೆಟಿವ್ ಬಂದಿದ್ದು, 70 (ಐಸಿಎಂಆರ್ ವರದಿ)ಮಂದಿ ಪಾಸಿಟಿವ್ ಬಂದಿದ್ದಾರೆ. ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 21,650 ಆಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಮವಾರದವರೆಗೆ ಒಟ್ಟು 1,76,204 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,54,554 ಮಂದಿ ನೆಗೆಟಿವ್ ಹಾಗೂ 21,650 ಮಂದಿ ಪಾಸಿಟಿವ್ ಬಂದಿದ್ದಾರೆ. ಈಗಾಗಲೇ 20,505 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಒಟ್ಟು 180 ಮಂದಿ ಮೃತಪಟ್ಟಿದ್ದಾರೆ.

ಹಿರಿಯ ಮಹಿಳೆ ಸಾವು: ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಸೋಂಕಿನಿಂದ ಉಡುಪಿ ತಾಲೂಕಿನ 80 ವರ್ಷ ಪ್ರಾಯದ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದ ಈ ಮಹಿಳೆ ಉಸಿರಾಟದ ತೊಂದರೆಯೊಂದಿಗೆ ಚಿಕಿತ್ಸೆಗೆ ದಾಖಲಾಗಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತ ಪಟ್ಟಿದ್ದಾರೆ. ಈ ಮೂಲಕ ಕೋವಿಡ್‌ನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 180ಕ್ಕೇರಿದೆ ಎಂದು ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News