ಕೊರೋನ ಸೋಂಕು ತೀವ್ರ ಹರಡುವ ಕಾರ್ಯಕ್ರಮಗಳಿಂದ ದೂರವಿರಿ: ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ

Update: 2020-10-27 15:09 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ. 27: ಉತ್ಸವ ಕಾಲದಲ್ಲಿ ಕನಿಷ್ಠ ಐದು ರಾಜ್ಯಗಳಲ್ಲಿ ಕೊರೋನ ಸೋಂಕು ಹರಡುತ್ತಿರುವುದನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ದೃಢಪಡಿಸಿದೆ. ಅಲ್ಲದೆ, ಕೊರೋನ ಸೋಂಕು ತೀವ್ರ ಹರಡುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ದೇಶದ ಜನರಲ್ಲಿ ಮನವಿ ಮಾಡಿದೆ.

 ದೇಶದಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶೇ. 90 ದಾಟಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ. ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಕಳೆದ ಐದು ವಾರಗಳಿಂದ ದಿನದ ಸಾವಿನ ಸರಾಸರಿ ಸಂಖ್ಯೆ ನಿರಂತರ ಇಳಿಕೆಯಾಗಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಶೇ. 90 ದಾಟಿದೆ ಎಂದರು. 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಶೇ. 78 ಸಕ್ರಿಯ ಪ್ರಕರಣಗಳು ಇವೆ. ಐದು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 58 ಸಾವು ವರದಿಯಾಗಿದೆ ಎಂದು ಭೂಷಣ್ ಹೇಳಿದರು.

ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ 57 ದಿನಗಳಲ್ಲಿ 1 ಲಕ್ಷದಿಂದ 10 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಇತ್ತೀಚೆಗೆ 13 ದಿನಗಳಲ್ಲಿ 10 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಇದು ತೃಪ್ತಿಕರ ಎಂದು ಅವರು ತಿಳಿಸಿದ್ದಾರೆ. ಈ ಉತ್ಸವದ ಕಾಲದಲ್ಲಿ ಕೊರೋನ ಸೋಂಕು ಹರಡುತ್ತಿರುವುದು ವಿಷಾದದ ವಿಚಾರ. ದಿಲ್ಲಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಪಶ್ಚಿಮಬಂಗಾಳದಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News