ಮುಲ್ಕಿ: ಎಂ. ಕೆ. ಅಬ್ದುಲ್ ಖಾದರ್ ಹಾಜಿ ನಿಧನ

Update: 2020-10-27 17:54 GMT

ಮುಲ್ಕಿ, ಅ.27: ರಾಜ್ಯ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ, ಉದ್ಯಮಿ ಕಾರ್ನಾಡುವಿನ ಎಂ.ಕೆ. ಅಬ್ದುಲ್ ಖಾದರ್ ಹಾಜಿ (ಬಾವಾಕ) ಅಲ್ಪಕಾಲದ ಅನಾರೋಗ್ಯದಿಂದ ಚೆನ್ನೈಯ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ರಾಜಕೀಯದೊಂದಿಗೆ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದ ಅವರು ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಮುಲ್ಕಿಯ ಮುಸ್ಲಿಂ ಐಕ್ಯತಾ ವೇದಿಕೆಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸಮಾಜದ ಮುಂಚೂಣಿ ನಾಯಕರಾಗಿ ಜನಾನುರಾಗಿಯಾಗಿದ್ದ ಎಂ.ಕೆ. ಅಬ್ದುಲ್ ಖಾದರ್ ಹಾಜಿ ಕೊಡುಗೈ ದಾನಿಯಾಗಿದ್ದು, ಎಲ್ಲ ಜಾತಿ ಧರ್ಮೀಯರ ಪ್ರೀತಿಗೆ ಪಾತ್ರರಾಗಿದ್ದರು. ಇತ್ತೀಚೆಗೆ ಎನ್‌ಆರ್‌ಸಿ ವಿರುದ್ಧ ಮುಲ್ಕಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯು ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬುಧವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಮೃತದೇಹ ಚೆನ್ನೈಯಿಂದ ಮನೆಗೆ ತಲುಪಲಿದ್ದು, ಲುಹರ್ ನಮಾಝ್ ಬಳಿಕ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ: ಎಂ.ಕೆ.ಅಬ್ದುಲ್ ಖಾದರ್ ಹಾಜಿಯ ನಿಧನಕ್ಕೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡು, ಕರುಣಾಕರ ಶೆಟ್ಟಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ, ಮಂಜುನಾಥ ಕಂಬಾರ, ಮಾಜಿ ಸದಸ್ಯ ಅಬ್ದುರ್ರಝಾಕ್, ಜೆಡಿಎಸ್ ನಾಯಕ ಹರೀಶ್ ಪುತ್ರನ್, ರಿಯಾಝ್‌ ಕಾರ್ನಾಡ್, ರಾಜ್ಯ ದಾರಿಮಿ ಉಲಮಾ ಒಕ್ಕೂಟ, ಮುಲ್ಕಿ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News