ಭಟ್ಕಳ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣ : ಪ್ರಕಟಣೆ ಹೊರಡಿಸಿದ ಪೊಲೀಸ್ ಇಲಾಖೆ

Update: 2020-10-27 17:06 GMT

ಭಟ್ಕಳ : ತಾಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದೆ. ಕಿದ್ವಾಯಿರೋಡ್, ಫಿರ್ದೋಸ್ ನಗರ, ಹೆಬಳೆ ರೋಡ್ ಸೇರಿದಂತೆ ವಿವಿಧೆಡೆ  ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಮತ್ತು ನಗರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಕಿದ್ವಾಯಿ ರಸ್ತೆಯ ಮಸೀದಿ ಸಮೀಪ ಅಲ್ಹಿಜಾಜ್‍ ಅವರ ಅದ್ವಾನ್‍ ರುಕ್ಕುದ್ದೀನ ಮನೆಯ ಬಚ್ಚಲು ಮನೆಯ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು 1 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ. ಮನೆಯಲ್ಲಿ ಯಾರೂ ಇರದ ಸಮಯ ಕಳವು ಮಾಡಿದ್ದಾರೆ ಎಂದು ದೂರಲಾಗಿದೆ.

ಹೆಬಳೆಯ ಫೀರ್ದೊಸ್ ನಗರದ ಸೈಯದ್‍ ಇಬ್ರಾಹಿಂ ಎಂಬವರ ಮನೆಯಲ್ಲಿ ಯಾರೂ ಇರದ ವೇಳೆ ಮನೆಗೆ ನುಗ್ಗಿದ ಕಳ್ಳರು 30 ಸಾವಿರ ರೂ. ಕಳವು ಮಾಡಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ತಾಲೂಕಿನ ವಿವಿಧೆಡೆ ಮನೆ ಕಳ್ಳತನ ನಡೆಸಿರುವುದು ಪೊಲೀಸರಿಗೆ ಸವಾಲಾಗಿದೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ಪ್ರಕಟಣೆ: ಭಟ್ಕಳ ತಾಲೂಕಿನಲ್ಲಿ ಕಳ್ಳತನ ಆಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಪ್ರಕಟಣೆ ನೀಡಲಾಗಿದೆ. ಹಗಲು ಮತ್ತು ರಾತ್ರಿ ಮನೆ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಯಾರೇ ಸಾರ್ವಜನಿಕರು ಮನೆಗೆ ಬೀಗ ಹಾಕಿ ಹೊರಗಡೆ ಅಥವಾ ಬೇರೆ ಊರಿಗೆ ಹೋಗುವ ಸಂದರ್ಭದಲ್ಲಿ ಮನೆಯ ಲೊಕೇಶನ್ ಹಾಗೂ ಬೀಗ ಹಾಕಿದ ಮನೆಯ ವಿವರಗಳನ್ನು  ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ. ತಮ್ಮ ವಿವರಗಳನ್ನು ಈ ಕೆಳಕಂಡ ಮೊಬೈಲ್ ನಂಬರಗೆ ವಾಟ್ಸಪ್ ಮಾಡಬೇಕಾಗಿ ಸಾರ್ವಜನಿಕರಲ್ಲಿ ಕೋರಲಾಗಿದೆ. ಇದರಿಂದ ನಿಮ್ಮ ಮನೆಯ ಸುರಕ್ಷತೆಯ ಕುರಿತು ಹಗಲು ಮತ್ತು ರಾತ್ರಿ ಬೀಟ್ ಸಿಬ್ಬಂದಿಯವರು ನಿಮ್ಮ ಮನೆಯ ಮೇಲೆ ನಿಗಾ ವಹಿಸಲು ಅನುಕೂಲವಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಟ್ಕಳ ಪೊಲೀಸ್ ವೃತ್ತ ನಿರೀಕ್ಷಕರು, ಮೊಬೈಲ್ ನಂಬರ್ - 9480805232,  ಪಿ.ಎಸ್.ಐ ಭಟ್ಕಳ ಶಹರ ಪೊಲೀಸ್‍ ಠಾಣೆ -9480805269,  ಪಿ.ಎಸ್.ಐ ಭಟ್ಕಳ ಗ್ರಾಮೀಣ ಪೊಲೀಸ್‍ ಠಾಣೆ - 9480805252,  ಪಿ.ಎಸ್.ಐ ಮುರ್ಡೇಶ್ವರ ಪೊಲೀಸ್‍ ಠಾಣೆ - 9480805253. ಈ ಸಂಖ್ಯೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News