ತಂದೆಯ ಭಾವಚಿತ್ರದ ಪಕ್ಕದಲ್ಲಿ ನಿಂತು ಪಕ್ಷದ ಪ್ರಣಾಳಿಕೆಯ ಚಿತ್ರೀಕರಣ ನಡೆಸಿದ್ದ ಚಿರಾಗ್ ಪಾಸ್ವಾನ್!

Update: 2020-10-27 17:39 GMT

ಪಾಟ್ನಾ: ಬಿಹಾರ ಚುನಾವಣೆ ಆರಂಭಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಚಿರಾಗ್ ಪಾಸ್ವಾನ್ ಇತ್ತೀಚೆಗೆ ನಿಧನರಾಗಿರುವ ತನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಭಾವಚಿತ್ರದ ಪಕ್ಕದಲ್ಲಿ ನಿಂತು ಭಾಷಣವನ್ನು ರೆಕಾರ್ಡ್ ಮಾಡಲು ತಯಾರಿ ನಡೆಸುತ್ತಿರುವ ವೀಡಿಯೊ ಆನ್ ಲೈನ್ ನಲ್ಲಿ ಹೊರಹೊಮ್ಮಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಲೋಕ ಜನಶಕ್ತಿ ಪಕ್ಷದ ನಾಯಕ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆಯ ಸಂದೇಶವನ್ನು ಚಿತ್ರೀಕರಿಸುತ್ತಿದ್ದಾಗ  ಈ ವೀಡಿಯೊ ತೆಗೆಯಲಾಗಿತ್ತು. ಚಿರಾಗ್ ಅ.8 ರಂದು ತನ್ನ ತಂದೆ ನಿಧನರಾದ ದುಃಖದಲ್ಲಿದ್ದಾಗ ಧರಿಸಿದ್ದ ಬಿಳಿಬಟ್ಟೆಗಳನ್ನು ಶೂಟಿಂಗ್ ವೇಳೆ ಧರಿಸಿದ್ದರು. ರಾಮ್ ವಿಲಾಸ್ ಪಾಸ್ವಾನ್ ಭಾವಚಿತ್ರದ ಪಕ್ಕದಲ್ಲಿ ನಿಂತು ರೆಕಾರ್ಡಿಂಗ್ ಗೆ ಮುಂಚಿತವಾಗಿ ಅವರು ತಮ್ಮ ತಂಡದೊಂದಿಗೆ ಚಾಟ್ ಮಾಡುವುದು ವೀಡಿಯೊದಲ್ಲಿ ಕೇಳಿಬರುತ್ತಿದೆ. ಹಿಂದಿಯಲ್ಲಿ ಒಂದು ವಾಕ್ಯ ಹೇಳಿದ ಚಿರಾಗ್ ಬಳಿಕ ವಿರಾಮ ಪಡೆದು ಮತ್ತೆ ಆರಂಭಿಸೋಣ ಎಂದು ಹೇಳುವುದು ವೀಡಿಯೊದಲ್ಲಿದೆ.

ವೀಡಿಯೊ ಸೋರಿಕೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ದೂಷಿಸಿದ ಚಿರಾಗ್, ಈ ವೀಡಿಯೊದ ಉದ್ದೇಶ ನನಗೆ ಅರ್ಥವಾಗಲಿಲ್ಲ. ನನ್ನ ತಂದೆಯ ಸಾವಿನ ಬಗ್ಗೆ ನಾನು ದುಃಖಿತನಾಗಿದ್ದೇನೆ ಎನ್ನುವುದಕ್ಕೆ ನಾನು ಪುರಾವೆ ನೀಡಬೇಕೇ? ನಿತೀಶ್ ಕುಮಾರ್ ಅವರು  ಯಾವ ಮಟ್ಟಕ್ಕೆ ಆತಂಕ ಕ್ಕೊಳಗಾಗಿದ್ದಾರೆ ಎಂದು ಇದು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ

ಪಾಸ್ವಾನ್ ವೀಡಿಯೊಗೆ ಕೆಲವರು ಟ್ರೋಲ್ ಮಾಡಿದ್ದು, ಬಿಹಾರ ಚುನಾವಣೆಯಲ್ಲಿ ಎಲ್ ಜೆಪಿ ಎಷ್ಟು ಸೀಟುಗಳನ್ನುಗೆಲ್ಲುತ್ತದೋ ಗೊತ್ತಿಲ್ಲ. ಆದರೆ ಬಾಲಿವುಡ್ ಮಾತ್ರ ಬುದ್ದಿವಂತ ನಟನನ್ನು ಕಳೆದುಕೊಂಡಿದೆ. ಎಂತಹ ನಟನೆ ಚಿರಾಗ್ ಅವರೇ.. ಎಂದು  ಹಿಂದಿ ಚಿತ್ರದಲ್ಲಿ ನಟಿಸಿದ್ದ ಚಿರಾಗ್ ರನ್ನು ಓರ್ವ ಕೆಣಕಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News