ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತು ಶೀಘ್ರ ಸಭೆ : ಮೇಯರ್

Update: 2020-10-28 09:47 GMT

ಮಂಗಳೂರು, ಅ.28: ನಗರದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಯಾವುದೇ ಮಾಹಿತಿ ದೊರೆಯುತ್ತಿಲ್ಲ, ಅನುದಾನ ಬೇಕಾಬಿಟ್ಟಿ  ಖರ್ಚು ಮಾಡಲಾಗುತ್ತಿದೆ ಎಂಬ ಆರೋಪ ಮನಪಾ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಶೀಘ್ರ ಸಭೆ ನಡೆಸುವುದಾಗಿ ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಲಂ ಏರಿಯಾವಾಗಿರುವ ತಮ್ಮ ಪ್ರದೇಶದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಬೇರೆಡೆ ವರ್ಗಾಯಿಸ ಲಾಗಿದೆ. ಈ ರೀತಿ ಉಪಯೋಗಿಸಲು ಅವಕಾಶವಿದೆಯೇ ಎಂದು ಎಂದು ಸಭೆಯಲ್ಲಿ ಸದಸ್ಯ ಅಬ್ದುಲ್ ಲತೀಫ್ ಪ್ರಶ್ನಿಸಿದರು.

ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, ಬೇರೆ ಕಾಮಗಾರಿಗೆ ಉಪಯೋಗಿಸಲು ಅವಕಾಶ ಇಲ್ಲ. ಆದರೆ ವಿಶೇಷ ಅನುಮತಿ ಪಡೆದು ಮಾಡಬಹುದು ಎಂದರು.

ನಮ್ಮಲ್ಲಿ ತಡೆಗೋಡೆ, ರಸ್ತೆ ಕಾಮಗಾರಿ ಬಾಕಿ ಇದೆ. ಆದರೆ ಅನುದಾನವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಅಬ್ದುಲ್ ಲತೀಫ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದಾಗ ಈ ಬಗ್ಗೆ ಪರಿಶೀಲಿಸುವುದಾಗಿ ಆಯುಕ್ತರು ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿಗದಿಯಾದ ಅನುದಾನ ಬೇರೆಡೆ ವರ್ಗಾಯಿಸಬಹುದಾಗಿದ್ದರೆ ಎಲ್ಲಾ ವಾರ್ಡ್‌ಗಳಿಗೂ ನೀಡಿ, ಯಾರಿಗೂ ಅಸಮಾಧಾನ ಬೇಡ ಎಂದು ದಸ್ಯ ಶಶಿಧರ ಹೆಗ್ಡೆ ಹೇಳಿದರು.

ಈ ಸಂದರ್ಭ ವಿಪಕ್ಷ ನಾಯಕ ಅಬ್ದುಲ್ ರವೂಫ್ ಪ್ರತಿಕ್ರಿಯಿಸಿ, ನಗರದ ಸೆಂಟ್ರಲ್ ಮಾರುಕಟ್ಟೆ ಅತಂತ್ರ ಪರಿಸ್ಥಿತಿಯಲ್ಲಿದೆ. ಕೂಲಿಕಾರ್ಮಿಕರು ಸೇರಿ ವ್ಯಾಪಾರಿಗಳು ಬೀದಿಪಾಲಾಗಿದ್ದಾರೆ. ಅದರಿಂದ ಮನಪಾಕ್ಕೆ ಬರುತ್ತಿದ್ದ 1 ಕೋಟಿ ರೂ. ಆದಾಯ ಸ್ಥಗಿತಗೊಂಡಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ನೆಹರೂ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ 1.5 ಕೋಟಿ ರೂ. ಹಣ ಪಾವತಿಸಲಾಗಿದ್ದು, ಕೋರ್ಟ್ ತಡೆ ಯಾಜ್ಞೆಯಿಂದ ಕಾಮಗಾರಿ ನಿಂತಿದೆ. ಈ ರೀತಿ ಸ್ಮಾರ್ಟ್ ಸಿಟಿ ಯೋಜನೆಯ ಬಹು ನಿರೀಕ್ಷೆಯ ಕಾಮಗಾರಿಯ ಅನುದಾನವನ್ನು ಬೇಕಾಬಿಟ್ಟಿ ಯಲ್ಲಿ ವ್ಯಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗೆ ವೇಗ ದೊರಕಿದೆ. ಉಸ್ತುವಾರಿ ಕಾರ್ಯದರ್ಶಿಯಾಗಿ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್‌ರವರು ಕಾರ್ಯ ನಿರ್ವಹಿಸುತ್ತಿರುವುದರಿಂದ ಕಾಮಗಾರಿ ತ್ವರಿತಗತಿಯಲ್ಲಿ ನೆರವೇರಲಿದೆ. ಮಾತ್ರವಲ್ಲದೆ ಮೂಲ ಪ್ರಸ್ತಾವನೆಯ ನಿಗದಿತ ಕಾಮಗಾರಿಗಳಿಗೆ ಅನುದಾನ ಮಾತ್ರವೇ ಮೀಸಲಿಡುವ ಕಾರ್ಯ ಆಗಬೇಕು ಎಂದು ಮುಖ್ಯ ಸಚೇತಕ ಪೆ್ರೀಮಾನಂದ ಶೆಟ್ಟಿ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News