ನನ್ನ ಜೀವ ಅಪಾಯದಲ್ಲಿದೆ:ತಮಿಳು ನಿರ್ದೇಶಕ ಸೀನು ರಾಮಸ್ವಾಮಿ

Update: 2020-10-28 11:49 GMT

ಚೆನ್ನೈ : ತನ್ನ ಜೀವ ಅಪಾಯದಲ್ಲಿದೆ ರಕ್ಷಣೆ ಬೇಕೆಂದು ಕೋರಿ ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನಾಧರಿತ ಚಿತ್ರ ನಿರ್ದೇಶಿಸಲಿರುವ ಖ್ಯಾತ ತಮಿಳು ಚಿತ್ರ ನಿರ್ದೇಶಕ ಆರ್. ಸೀನು ರಾಮಸ್ವಾಮಿ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ರಾಮಸ್ವಾಮಿ ಟ್ವೀಟ್ ಮಾಡಿದ್ದಾರೆ.

`800' ಎಂಬ ಹೆಸರಿನ  ಈ ಚಿತ್ರದಿಂದ ಹೊರನಡೆಯುವಂತೆ ಖ್ಯಾತ ನಟ ವಿಜಯ್ ಸೇತುಪತಿ ಅವರಿಗೆ ತಾವು ಸಲಹೆ ನೀಡಿದ ನಂತರ ತಮಗೆ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬರುತ್ತಿವೆ ಎಂದು ರಾಮಸ್ವಾಮಿ ಹೇಳಿದ್ದಾರಲ್ಲದೆ ತಮಗೆ ರಸ್ತೆಗೆ ಕಾಲಿಡಲು ಭಯವಾಗುತ್ತಿದೆ ಎಂದಿದ್ದಾರೆ.

``ಹೇಳಲು ಸಾಧ್ಯವಾಗದ ಪದಗಳನ್ನು ಬಳಸಿ ನನ್ನನ್ನು ನಿಂದಿಸಲಾಗುತ್ತಿದೆ. ನನ್ನ ವಾಟ್ಸ್ಯಾಪ್ ತೆರೆಯಲು ಕೂಡ ಸಾಧ್ಯವಾಗುತ್ತಿಲ್ಲ,'' ಎಂದು ಅವರು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಕಳೆದ ವಾರ ವಿಜಯ್ ಸೇತುಪತಿ ಅವರ ಪುತ್ರಿಗೆ ಟ್ವಿಟ್ಟರ್‍ನಲ್ಲಿ ಅತ್ಯಾಚಾರ ಬೆದರಿಕೆ ಹಾಕಲಾಗಿತ್ತು.

ತಮಗೆ ಬರುತ್ತಿರುವ ಬೆದರಿಕೆಗಳ ಹಿಂದೆ ಸೇತುಪತಿ ಅಭಿಮಾನಿಗಳ ಕೈವಾಡವನ್ನು ರಾಮಸ್ವಾಮಿ ನಿರಾಕರಿಸಿದ್ದಾರೆ.  ಅವರಿಗೆ ರಕ್ಷಣೆಯೊದಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮುರಳೀಧರನ್ ಅವರನ್ನು ದೇಶದ್ರೋಹಿ ಎಂದು ಆರೋಪಿಸಿ ಹಾಗೂ ಅವರು ಲಂಕಾ ತಮಿಳರ ಹತ್ಯೆಗಳನ್ನು ಬೆಂಬಲಿಸಿದ್ದಾರೆಂದು ಹೇಳಿ ಹಿರಿಯ ಚಿತ್ರ ನಿರ್ದೇಶಕ ಭಾರತಿರಾಜ್, ಪಿಎಂಕೆ ಮುಖ್ಯಸ್ಥ ಪಿ. ರಾಮದೋಸ್ ಹಾಗೂ ಕನಿಷ್ಠ ಇಬ್ಬರು ಸಚಿವರು ಕೂಡ ಸೇತುಪತಿಗೆ ಚಿತ್ರದಿಂದ ಹೊರನಡೆಯುವಂತೆ ಹೇಳಿದ್ದರು.

ಮುತ್ತಯ್ಯ ಮುರಳೀಧರನ್ ಅವರು ಶ್ರೀಲಂಕಾದಲ್ಲಿ ತಮಿಳರ ಹತ್ಯೆಯನ್ನು ಸಂಭ್ರಮಿಸುವ ರೀತಿಯ ಹೇಳಿಕೆ ನೀಡಿದ್ದಾರೆಂದು ಹಲವರು ಆರೋಪಿಸಿದ್ದರೂ ಕ್ರಿಕೆಟಿಗ ಮಾತ್ರ ಈ ಆರೋಪ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News