ನ್ಯಾಯಾಧೀಶರ ವಿರುದ್ಧ ಟೀಕೆ: ಮಾಜಿ ನ್ಯಾಯಾಧೀಶ ಕರ್ಣನ್ ವಿರುದ್ಧ ಪ್ರಕರಣ ದಾಖಲು

Update: 2020-10-28 12:58 GMT

ಚೆನ್ನೈ, ಅ.28: ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರ ವಿರುದ್ಧ ನೀಡಿರುವ ಹೇಳಿಕೆಗಾಗಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಸಿ.ಎಸ್. ಕರ್ಣನ್ ವಿರುದ್ಧ ಚೆನ್ನೈ ಪೊಲೀಸ್ ಸೈಬರ್ ಸೆಲ್ ಮಂಗಳವಾರ ಪ್ರಕರಣ ದಾಖಲಿಸಿದೆ ಎಂದು ವರದಿಯಾಗಿದೆ. 

‘ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಕೆಲವು ನ್ಯಾಯಾಧೀಶರು ಮಹಿಳಾ ನ್ಯಾಯಾಧೀಶರು ಮತ್ತು ನ್ಯಾಯಾಲಯದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ’ ಎಂದು ಕರ್ಣನ್ ಹೇಳಿರುವ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯರ ಹೆಸರನ್ನು ಉಲ್ಲೇಖಿಸಿರುವ ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಪ್ರಧಾನ ನ್ಯಾಯಾಧೀಶ(ಸಿಜೆಐ) ಎಸ್‌ಎ ಬೋಬ್ಡೆಗೆ ಮದ್ರಾಸ್ ಹೈಕೋರ್ಟ್‌ನ ನ್ಯಾಯವಾದಿ ಪತ್ರ ಬರೆದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕರ್ಣನ್ ಹೇಳಿಕೆ ಮಹಿಳೆಯರ ಘನತೆಗೆ ಧಕ್ಕೆ ತರುವುದಲ್ಲದೆ ಸ್ತ್ರೀದ್ವೇಷದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪತ್ರದ ಆಧಾರದಲ್ಲಿ ಮಂಗಳವಾರ ಸೈಬರ್ ಸೆಲ್ ಪೊಲೀಸರು ಕರ್ಣನ್ ವಿರುದ್ಧ ಸೆಕ್ಷನ್ 153 ಮತ್ತು 509ರಡಿ ಪ್ರಕರಣ ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್, ನ್ಯಾಯಾಂಗ ಮತ್ತು ನ್ಯಾಯಾಂಗ ಕಲಾಪದ ವಿರುದ್ಧ ನಿಂದನೀಯ ಹೇಳಿಕೆ ನೀಡಿದ್ದಕ್ಕೆ 2017ರಲ್ಲಿ ಕರ್ಣನ್‌ಗೆ 6 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News