ತಂತ್ರಜ್ಞ ಉಡುಪಿ ಶ್ರೀನಿವಾಸ್‌ಗೆ ರಾಜ್ಯೋತ್ಸವದ ಗರಿ

Update: 2020-10-28 16:06 GMT

ಉಡುಪಿ, ಅ. 28: ಹೊಂಗೆ ಎಣ್ಣೆಯನ್ನು ವಾಣಿಜ್ಯಿಕ ರೀತಿಯಲ್ಲಿ ಬಳಕೆಗೆ ತರಲು ಶ್ರಮಿಸಿದ ಉಡುಪಿ ಮೂಲದ ಬೆಂಗಳೂರು ನಿವಾಸಿ ತಂತ್ರಜ್ಞ ಪ್ರೊ. ಉಡುಪಿ ಶ್ರೀನಿವಾಸ್ ಅವರಿಗೆ ಈ ಬಾರಿಯ ವಿಜ್ಞಾನ-ತಂತ್ರಜ್ಞಾನ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಉಡುಪಿ ಚಿಟ್ಪಾಡಿಯ ಬೈಲೂರಿನವರಾದ 73 ವರ್ಷ ಪ್ರಾಯದ ಉಡುಪಿ ಶ್ರೀನಿವಾಸ್, ಆರಂಭಿಕ ಶಿಕ್ಷಣವನ್ನು ಉಡುಪಿಯ ಮಹಾತ್ಮ ಗಾಂಧಿ ಸ್ಕೂಲ್ , ಕ್ರಿಶ್ಚಿಯನ್ ಹೈ ಸ್ಕೂಲ್ ಹಾಗು ಎಂಜಿಎಂ ಕಾಲೇಜಿಗಳಲ್ಲಿ ಮುಗಿಸಿ 1969ರಲ್ಲಿ ಮದರಾಸಿನ ಐಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿಯನ್ನು ಪಡೆದಿದ್ದು, ಅಲ್ಲೇ 1971ರಲ್ಲಿ ಎಂಟೆಕ್ ಪದವಿ ಪೂರ್ಣಗೊಳಿಸಿದ್ದರು. 1976ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆದ ಅವರು ಅಲ್ಲೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರೂ, ವಿಭಾಗ ಮುಖ್ಯಸ್ಥರಾಗಿ 2012ರಲ್ಲಿ ಸೇವಾ ನಿವೃತ್ತರಾದರು. ಆ ಬಳಿಕ ಅವರು ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

ಉಡುಪಿ ಶ್ರೀನಿವಾಸ್ ಅವರ 35ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. 50ಕ್ಕೂ ಅಧಿಕ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಸೆಮಿನಾರುಗಳಲ್ಲಿ ಮಂಡಿಸಿದ್ದಾರೆ. ಇವರು ವೈಬ್ರೇಶನ್ ಅನಲಿಸಿಸ್ ಮತ್ತು ಮೆಶಿನ್ ಡೈನಾಮಿಕ್ಸ್‌ನಲ್ಲಿ ವಿಶೇಷ ಪರಿಣತಿ ಹೊಂದಿ ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಸಂಶೋಧನೆ ಹಾಗೂ ಅನುಭವಗಳಿಂದ ಕೈಗಾರಿಕಾ ವಲಯಕ್ಕೆ ಸಲಹೆಗಳನ್ನು ನೀಡುವ ಜತೆಗೆ ಪರಿಸರಕ್ಕೆ ಪೂರಕವಾದ ಹೊಂಗೆ ಎಣ್ಣೆಯ ಬಳಕೆಯನ್ನು ಪೆಟ್ರೋಲಿಯಂ ಉತ್ಪನ್ನಗಳೊಂದಿಗೆ ಚಾಲ್ತಿಗೆ ತರುವಲ್ಲಿ ಅವರು ವಿಶೇಷ ಪರಿಶ್ರಮ ಪಟ್ಟಿದ್ದಾರೆ. ಹೊಂಗೆ ಎಣ್ಣೆಯನ್ನು ಪೆಟ್ರೋಲಿಯಂ ಉತ್ಪನ್ನ ಗಳೊಂದಿಗೆ ಮಿಶ್ರಣ ಮಾಡಿ ಬಳಸಲಾಗುತ್ತಿದೆ. ಇದು ಪರಿಸರ ಪೂರಕವಾದ ಒಂದು ಪ್ರಯೋಗವಾಗಿದೆ.

‘ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸಂತೋಷವಾಗಿದೆ. ಸಮಾಜಕ್ಕೆ ನನ್ನಿಂದಾದ ಸೇವೆಯನ್ನು ಸಲ್ಲಿಸಿದ್ದೇನೆ’ ಎಂದು ಶ್ರೀನಿವಾಸ್ ತನ್ನನ್ನು ಸಂಪರ್ಕಿಸಿದ ಪತ್ರಕರ್ತರೊಂದಿಗೆ ಪ್ರಶಸ್ತಿಯ ಸಂತಸವನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News