ನ್ಯಾಯವಾದಿ ಎಂ.ಕೆ.ವಿಜಯಕುಮಾರ್‌ಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

Update: 2020-10-28 15:02 GMT

ಕಾರ್ಕಳ, ಅ.28: ನ್ಯಾಯಾಂಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್ ಅವರನ್ನು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಳೆದ 52 ವರ್ಷಗಳ ಸುಧೀರ್ಘ ಕಾಲದಿಂದ ವಕೀಲ ವೃತ್ತಿ ಮಾಡಿಕೊಂಡು ಬಂದಿರುವ ಎಂ.ಕೆ.ವಿಜಯ ಕುಮಾರ್ ಅವರ 55 ಮಂದಿ ಶಿಷ್ಯರು ಇದೀಗ ದೇಶದ ವಿವಿಧೆಡೆಗಳಲ್ಲಿ ನ್ಯಾಯವಾದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿರುವ ಅಬ್ದುಲ್ ನಝೀರ್ ಕೂಡ ಇವರ ಶಿಷ್ಯರೇ.

ಸದಾ ಲವಲವಿಕೆಯಿಂದ ಜನತೆಯ ಜೊತೆ ಬೆರೆಯುವ ಇವರು, ಎಲ್ಲಾ ಕ್ಷೇತ್ರಗಳಲ್ಲೂ ಕ್ರೀಯಾಶೀಲ ಸಾಧಕರೆನಿಸಿಕೊಂಡಿದ್ದಾರೆ. ವಕೀಲ ವೃತ್ತಿಯನ್ನು ಜೀವನದ ಪ್ರಮುಖ ವೃತ್ತಿಯನ್ನಾಗಿಸಿಕೊಂಡರೂ, ಉಳಿದ ಕ್ಷೇತ್ರಗಳಲ್ಲಿ ಅವರ ಸಾಧನೆ ಸಣ್ಣದೇನಲ್ಲ. ಜಿಲ್ಲೆಯಲ್ಲಿ, ಅದರಲ್ಲೂ ಕಾರ್ಕಳ ತಾಲೂಕಿನಲ್ಲಿ ಎಂ.ಕೆ. ವಿಜಯಕುಮಾರ್ ಹೆಸರು ಕೇಳದವರೇ ಇರಲಿಕ್ಕಿಲ್ಲ. ನಿರಂತರ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುವ ಇವರು ತಮ್ಮ ಸಹಕಾರ ಮನೋಭಾವದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ.

ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾನ್ ಸುಬ್ಬಯ್ಯ ಶಾಸ್ತ್ರಿ ಮತ್ತು ಮಿಜಾರು ಕನಕಬೆಟ್ಟು ಮನೆತನದ ಲಕ್ಷ್ಮೀಮತಿ ಅಮ್ಮನವರ ಆರನೇ ಪುತ್ರನಾಗಿ 1944ರ ಜು.6ರಂದು ಜನಿಸಿದ ವಿಜಯಕುಮಾರ್, ಆರಂಭಿಕ ಶಿಕ್ಷಣವನ್ನು ಮೂಡಬಿದರೆ, ಕಾರ್ಕಳ, ಪೆರ್ವಾಜೆ, ಹಿರಿಯಂಗಡಿ, ಬೆಂಗಳೂರಿನಲ್ಲಿ ಪಡೆದಿದ್ದು, ಬಿಎಸ್ಸಿ ಪದವಿ ಹಾಗೂ ಕಾನೂನು ಪದವಿಯನ್ನು ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಪಡೆದಿದ್ದರು.
1967ರಲ್ಲಿ ಕಾನೂನು ಪದವಿ ಮುಗಿಸಿ ಮಂಗಳೂರಿನ ಅಂದಿನ ಪ್ರಸಿದ್ಧ ಸಿವಿಲ್ ನ್ಯಾಯವಾದಿ ಮಂಜಯ್ಯ ಹೆಗ್ಡೆ ಅವರ ಶಿಷ್ಯರಾಗಿ ವಕೀಲಿ ವೃತ್ತಿ ಬದುಕು ಪ್ರಾರಂಭಿಸಿದರು. 1969ರಿಂದ ಅವರು ಸ್ವತಂತ್ರವಾಗಿ ವಕೀಲಿ ವೃತ್ತಿಯಲ್ಲಿದ್ದಾರೆ.

ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಎತ್ತರಕ್ಕೇರುವುದರ ಜೊತೆಗೆ ರಾಜಕೀಯ ದಲ್ಲೂ ಸಕ್ರಿಯರಾಗಿದ್ದಾರೆ. ಕಾರ್ಕಳದ ಹಲವು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿ ಯಾಗಿ ಸಾರ್ವಜನಿಕ ರಂಗದಲ್ಲೂ ಸಕ್ರೀಯರಾಗಿದ್ದಾರೆ. ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿರುವ ಇವರು ನಾಲ್ಕು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಭವ ಅನುಭವಿಸಿದ್ದಾರೆ. ಆದರೂ ರಾಜಕೀಯ ಕ್ಷೇತ್ರದಲ್ಲಿ ನೇಪಥ್ಯಕ್ಕೆ ಸರಿಯದೇ ಜನತೆಗೆ ನಿರಂತರ ಸೇವೆ ಒದಗಿಸಿದ್ದಾರೆ. ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. 1977ರಲ್ಲಿ ಪ್ರಿಯಾಕಾರಿಣಿ ಅವರನ್ನು ವಿವಾಹವಾಗಿರುವ ಎಂ.ಕೆ.ವಿಜಯಕುಮಾರ್‌ಗೆ ಇಬ್ಬರು ಪುತ್ರರಿದ್ದಾರೆ.

''ಐವತ್ತು ವರ್ಷಗಳ ಕಾರ್ಯಸಾಧನೆ ವೃತ್ತಿ ಜೀವನದಲ್ಲಿ ತುಂಬು ತೃಪ್ತಿ ತಂದಿದೆ. ಹಲವು ಮಂದಿ ನನ್ನ ಶಿಷ್ಯರು ಇಂದು ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳಾಗಿ ಮೂಡಿ ಬಂದಿದ್ದಾರೆ. ಸುಪ್ರೀಂ ಕೋರ್ಟಿನ ಪ್ರಸಕ್ತ ನ್ಯಾಯಾಧೀಶರಾದ ಅಬ್ದುಲ್ ನಝೀರ್ ನನ್ನ ಶಿಷ್ಯರಲ್ಲಿ ಒಬ್ಬರು ಎನ್ನುವುದು ಬಹಳ ಆತ್ಮಾಭಿಮಾನದ ಸಂಗತಿ. ನನ್ನನ್ನು ಗುರುತಿಸಿದ ರಾಜ್ಯ ಸರಕಾರಕ್ಕೆ ಅಭಿನಂದನೆಗಳು''
-ಎಂ.ಕೆ.ವಿಜಯ ಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News