ಮಂಗಳೂರು: ಯುವ ಸಂಸತ್ ಕಲಾಪ ಯಶಸ್ವಿ

Update: 2020-10-28 15:42 GMT

ಮಂಗಳೂರು, ಅ.28: ಪ್ರಚಲಿತ ಸಮಸ್ಯೆಗಳ ಅನಾವರಣ, ಕೃಷಿ ಮಸೂದೆಯ ಪರಿಣಾಮ ಮತ್ತು ದುಷ್ಪರಿಣಾಮಗಳ ವಿಶ್ಲೇಷಣೆ, ಸರಕಾರದ ವೈಫಲ್ಯ ಕುರಿತ ಬಲವಾದ ಆಕ್ಷೇಪ, ಕಾರ್ಮಿಕ ಸಮಸ್ಯೆಗಳ ಬಗ್ಗೆ ಕಾವೇರಿದ ಚರ್ಚೆ, ಮಹಿಳಾ ದೌರ್ಜನ್ಯ ಬಗ್ಗೆ ಒಕ್ಕೊರಲಿನ ಖಂಡನೆ, ಶೂನ್ಯ ವೇಳೆ ನಂತರ ಪ್ರಶ್ನೋತರದೊಂದಿಗೆ ಮಂಗಳೂರಿನಲ್ಲಿ ಬುಧವಾರ ನಡೆದ ಯುವ ಸಂಸತ್ ಕಲಾಪ ಸಂಪೂರ್ಣ ಯಶಸ್ವಿಯಾಯಿತು.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಮತ್ತು ಯುಎನ್ ಸ್ವಯಂಸೇವಕರ ಭಾರತದ ಆಶ್ರಯದಲ್ಲಿ ನೆಹರೂ ಯುವ ಕೇಂದ್ರವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ತಾಂತ್ರಿಕ ಪಾಲುದಾರರಾಗಿ ಸಹಯೋಗ ನೀಡಿತ್ತು. ಕೋವಿದ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಸಂಸತ್ ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಿತು.

ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಉತ್ತಮ ನಾಗರಿಕರನ್ನಾಗಿ ರೂಪಿಸಿಕೊಳ್ಳಲು ಇಂತಹ ಅವಕಾಶಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಸಂವಿಧಾನದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಮತ್ತು ಜವಾಬ್ದಾರಿಗಳನ್ನು ಅರಿತುಕೊಳ್ಳುವಲ್ಲಿ ಈ ಚಟುವಟಿಕೆಗಳು ಬಹಳಷ್ಟು ಅನುಭವ ನೀಡುತ್ತವೆ ಎಂದು ಅವರು ಹೇಳಿದರು.

ಯುವ ಸಂಸತ್ ನಮ್ಮ ಸಂಸದೀಯ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ರಚನಾತ್ಮಕ ಕಾರ್ಯಕ್ರಮವಾಗಿದೆ. ಈ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಜೆಗಳಾಗಿ ಯುವಕರು ತಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಅರಿತುಕೊಳ್ಳುವಂತೆ ಮಾಡುತ್ತದೆ ಎಂದು ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಅತುಲ್ ಜೆ. ನಿಕಮ್ ಅಭಿಪ್ರಾಯಪಟ್ಟರು.

ನೆಹರೂ ಯುವ ಕೇಂದ್ರ ಮತ್ತು ಯುಎನ್‌ವಿ ಜಿಲ್ಲಾ ಯುವ ಸಂಯೋಜಕ ರಘುವೀರ್ ಸೂಟರ್‌ಪೇಟೆ ಕಾರ್ಯಕ್ರಮದ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಸೆಲ್ವಮಣಿ ಆರ್., ಎನ್‌ವೈಕೆಎಸ್ ರಾಜ್ಯ ಉಪ ನಿರ್ದೇಶಕ ಜೈನ್ ಜಾರ್ಜ್ ಉಪಸ್ಥಿತರಿದ್ದರು. ಸಮಗ್ರ ಕಲಿಕೆ ಕೇಂದ್ರದ ಕನ್ವೀನರ್ ಶ್ರೀನಿವಾಸನ್ ನಂದಗೋಪಾಲ್ ಯುವ ಸಂಸತ್ತಿನ ನಡವಳಿಕೆಯ ಪ್ರಕ್ರಿಯೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News