ಗಡಿ ವಿವಾದದಲ್ಲಿ ಮೂರನೇ ಪಕ್ಷದ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ: ಚೀನಾ

Update: 2020-10-28 17:05 GMT

ಬೀಜಿಂಗ್ (ಚೀನಾ), ಅ. 28: ಗಡಿ ಸಮಸ್ಯೆಯು ದ್ವಿಪಕ್ಷೀಯ ವಿಷಯವಾಗಿದೆ ಹಾಗೂ ಅದರಲ್ಲಿ ಮೂರನೇ ಪಕ್ಷದ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂದು ಚೀನಾ ಬುಧವಾರ ಹೇಳಿದೆ.

ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ತಲೆದೋರಿರುವ ಗಡಿ ವಿವಾದದ ಹಿನ್ನೆಲೆಯಲ್ಲಿ, ತನ್ನ ಸಾರ್ವಭೌಮತೆಯನ್ನು ರಕ್ಷಿಸುವ ಭಾರತದ ಪ್ರಯತ್ನಗಳಿಗೆ ಅವೆುರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಬಲವಾದ ಬೆಂಬಲ ವ್ಯಕ್ತಪಡಿಸಿದ ಬಳಿಕ ಚೀನಾ ಈ ಪ್ರತಿಕ್ರಿಯೆ ನೀಡಿದೆ.

‘‘ತನ್ನ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯಕ್ಕೆ ಎದುರಾಗಿರುವ ಬೆದರಿಕೆಗಳನ್ನು ಎದುರಿಸುತ್ತಿರುವ ಭಾರತದ ಜೊತೆಗೆ ಅಮೆರಿಕವು ಪ್ರಬಲವಾಗಿ ನಿಲ್ಲುವುದು’’ ಎಂಬುದಾಗಿ ಪಾಂಪಿಯೊ ಹೊಸದಿಲ್ಲಿಯಲ್ಲಿ ಮಂಗಳವಾರ ಹೇಳಿದ್ದರು. ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಜೊತೆ 2+2 ಮಾತುಕತೆಗಾಗಿ ಭಾರತಕ್ಕೆ ಆಗಮಿಸಿದ್ದರು.

‘‘ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಅಭಿವೃದ್ಧಿಯು, ಮೂರನೇ ದೇಶವೊಂದರ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳ ಮೇಲೆ ಸವಾರಿ ಮಾಡಬಾರದು ಎಂದು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಚೀನಾ ಅಭಿಪ್ರಾಯಪಟ್ಟಿದೆ.

‘‘ಗಡಿ ವಿವಾದವು ಚೀನಾ ಮತ್ತು ಭಾರತಗಳ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ. ಗಡಿಯಲ್ಲಿನ ಉದ್ವಿಗ್ನತೆ ಶಮನಕ್ಕಾಗಿ ಉಭಯ ಬಣಗಳು ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳ ಮೂಲಕ ಮಾತುಕತೆಗಳನ್ನು ನಡೆಸುತ್ತಿವೆ. ತಮ್ಮ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಜಾಣ್ಮೆಯನ್ನು ಚೀನಾ ಮತ್ತು ಭಾರತಗಳು ಹೊಂದಿವೆ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News