ದ್ವೇಷ, ಗುಂಪು ಘರ್ಷಣೆಗೆ ಕೊಲೆ ಪರಿಹಾರವಲ್ಲ : ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಶ್ರೀ

Update: 2020-10-28 15:53 GMT

ಮಂಗಳೂರು, ಅ.28: ವೈಯಕ್ತಿಕ ದ್ವೇಷ, ಹಣಕಾಸು ವ್ಯವಹಾರ ಮತ್ತು ಗುಂಪು ಘರ್ಷಣೆಗಳನ್ನು ಬದಿಗಿಟ್ಟು ಕಾನೂನು ಅಥವಾ ಪರಸ್ಪರ ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಹಲ್ಲೆ ಅಥವಾ ಕೊಲೆಗಳು ಇದಕ್ಕೆ ಪರಿಹಾರವಲ್ಲ ಎಂದು ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ಕಾರಣಗಳಿಗೆ ಸಂಬಂಧಿಸಿ ಯುವಕರ ಹತ್ಯೆಗಳಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಸಮಾಜದಲ್ಲಿ ಹತ್ಯಾ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕರು ಬಲಿಯಾಗುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಹೊಡೆದಾಡುವುದನ್ನು ಬಿಟ್ಟು ಯುವಕರು ಸಮಾಜದ ಉಳಿವಿಗಾಗಿ ಹೋರಾಡಬೇಕು ಎಂದು ಯುವಕರಿಗೆ ಕರೆ ನೀಡಿದರು.

ದಾರಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಘಟನೆಗಳ ನೇತೃತ್ವದಲ್ಲಿ ಅವಲೋಕನ ಸಭೆಗಳಾಗಿವೆ. ಯುವಕರು ದಾರಿ ತಪ್ಪದಂತೆ ಸುವಿಚಾರದತ್ತ ಕರೆದೊಯ್ಯುವ ಕಾರ್ಯ ನಿರಂತರವಾಗಿ ಆಗಲಿದೆ ಎಂದರು.

ಈ ಹಿಂದೆ ಲವ್ ಜಿಹಾದ್‌ನ್ನು ತಡೆಯುವಲ್ಲಿ ಕೂಡ ಅವಿರತ ಶ್ರಮವಹಿಸಿದ್ದೆವು. 30ಕ್ಕೂ ಅಧಿಕ ಕುಟುಂಬಗಳನ್ನು ಇದರಿಂದ ರಕ್ಷಿಸಿದ ದಾಖಲೆ ನಮ್ಮ ಬಳಿಯಿದೆ. ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದ ಹಲವರನ್ನು ಸರಿದಾರಿಗೆ ತಂದಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

ತಿಂಗಳಲ್ಲಿ ಮೂವರ ಕೊಲೆ: ಕಳೆದ ಒಂದು ತಿಂಗಳಿನಲ್ಲಿ ಕರಾವಳಿಯಲ್ಲಿ ಮೂವರು ಯುವಕರ ಕೊಲೆಯಾಗಿದೆ. ಅಲ್ಲಲ್ಲಿ ಕೊಲೆಯತ್ನ, ಬೆದರಿಕೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪಶ್ಚಿಮ ವಲಯ ಐಜಿಪಿ, ಮಂಗಳೂರು ಪೊಲೀಸ್ ಕಮಿಷನರ್ ಮತ್ತು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

ಮುಂದೆ ಇಂತಹ ಕೃತ್ಯಗಳು ಮರುಕಳಿಸಬಾರದು. ಪೊಲೀಸ್ ಇಲಾಖೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ವಿಭಾಗ ಸಂಯೋಜಕ್ ಭುಜಂಗ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News